
ಬೆಂಗಳೂರು: ರಾಜಕಾರಣ, ಪತ್ರಿಕಾ ರಂಗ ಬೇರ್ಪಡಿಸಲು ಸಾಧ್ಯವಿಲ್ಲ. ಪತ್ರಿಕೆ ಇಲ್ಲದೆ ರಾಜಕಾರಣ ನಡೆಯಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ 2023 ಮತ್ತು 2024ನೇ ಸಾಲಿನ ವಾರ್ಷಿಕ ಹಾಗೂ ವಿಶೇಷ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಉಪ ಮುಖ್ಯಮಂತ್ರಿ ,ಸರ್ಕಾರ ನಿರ್ಣಯಗಳನ್ನು ತೆಗೆದುಕೊಂಡರೂ ಅದನ್ನು ಜನರಿಗೆ ಮುಟ್ಟಿಸಲು ಪತ್ರಿಕೆಗಳು ಬೇಕು. ಹಾಗಾಗಿ ಜನ ಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಾಮಾಜಿಕ ವರದಿ ಬಿತ್ತರಿಸುವ ಮೂಲಕ ಪತ್ರಿಕೆಗಳು ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸುತ್ತಿವೆ ಎಂದರು.
ಸಮಾಜದ ಬದಲಾವಣೆಯಲ್ಲಿ, ಜ್ಞಾನ ಹೆಚ್ಚಿಸುವಲ್ಲಿ, ಭಾಷೆ ಬೆಳವಣಿಗೆಯಲ್ಲಿ ಪತ್ರಿಕೆಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ. ಪತ್ರಕರ್ತರನ್ನು ಗೌರವಿಸುತ್ತಿರುವ ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.
ಪತ್ರಿಕಾ ರಂಗ ಎಂಬುದು ಸಮಾಜದ ನಾಲ್ಕನೇ ಅಂಗವಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಷ್ಟೇ ಪತ್ರಿಕಾರಂಗವೂ ಪ್ರಮುಖವಾಗಿದೆ. ಸ್ವಸ್ಥ ಸಮಾಜ ಕಟ್ಟಲು ದಿನ ಪತ್ರಿಕೆಗಳು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಹಗಲಿರುಳು ಕೆಲಸ ಮಾಡುತ್ತಿವೆ ಎಂದರು.
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ಪತ್ರಕರ್ತರಿಗೆ ಆರೋಗ್ಯ ವಿಮೆ ಒದಗಿಸುವ ಯೋಜನೆ ಬಗ್ಗೆ ಈಗಾಗಲೇ ಎರಡು ಬಾರಿ ಸಭೆ ನಡೆಸಿ ಚರ್ಚಿಸಲಾಗಿದೆ. ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನುಂ ಮಾತನಾಡಿ, ವಾರ್ಷಿಕ ಪ್ರಶಸ್ತಿಯ ಮೊತ್ತವನ್ನು ರೂ. 25,000 ದಿಂದ ರೂ. 50,000ಕ್ಕೆ ಹೆಚ್ಚಿಸಲಾಗಿದೆ. ಜೀವಮಾನದ ಸಾಧನೆ ಮೊತ್ತವನ್ನು ರೂ. 1,00000ಕ್ಕೆ ಏರಿಸಲಾಗಿದೆ ಎಂದು ವಿವರಿಸಿದರು.
2023ನೇ ಸಾಲಿನ ಜೀವಮಾನದ ಸಾಧನೆಯ ವಿಶೇಷ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಅ.ಚ. ಶಿವಣ್ಣ ಹಾಗೂ 2024ನೇ ಸಾಲಿನ ಜೀವಮಾನದ ಸಾಧನೆಯ ವಿಶೇಷ ಪ್ರಶಸ್ತಿಗೆ ಭಾಜನರಾದ ವಾರ್ತಾ ಭಾರತಿಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಅವರಿಗೆ ಪ್ರದಾನ ಮಾಡಲಾಯಿತು.
Advertisement