
ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೆಸರಘಟ್ಟ ರಸ್ತೆಯ ಗಬ್ರೂ ಹೊಟೆಲ್ ಸಿಬ್ಬಂದಿಗಳು ಕನ್ನಡಿಗ ಡಿಲಿವರಿ ಬಾಯ್ ಮೇಲೆ ನಡೆಸಿದ್ದ ಹಲ್ಲೆ ಪ್ರಕರಣದ ಮತ್ತೊಂದು ವಿಡಿಯೋ ರಿಲೀಸ್ ಆಗಿದ್ದು, ಕನ್ನಡಪರ ಹೋರಾಟಗಾರರ ವ್ಯಾಪಕ ಪ್ರತಿಭಟನೆ ಬಳಿಕ ಕೊನೆಗೂ ಗಬ್ರೂ ಹೊಟೆಲ್ ಸಿಬ್ಬಂದಿ ಕ್ಷಮೆ ಕೇಳಿದ್ದಾರೆ.
ಹೌದು.. ಬೆಂಗಳೂರಿನ ಬೆಂಗಳೂರಿನ ಹೆಸರಘಟ್ಟ ರಸ್ತೆಯ ಚಿಕ್ಕಬಾಣಾವರ ಬಳಿಯ ಸಪ್ತಗಿರಿ ಆಸ್ಪತ್ರೆ ಬಳಿ ಇರುವ Gabru Bistro and Cafe ಹೋಟೆಲ್‌ಗೆ ತೆರಳಿದ್ದ ಕನ್ನಡಿಗರೊಬ್ಬರು ಕನ್ನಡದಲ್ಲಿ ಆರ್ಡರ್ ಹೇಳಿದ್ದಾರೆ. ಇದಕ್ಕೆ ಅಲ್ಲಿದ್ದ ಹೊಟೆಲ್ ಸಿಬ್ಬಂದಿ ನನಗೆ ಅರ್ಥವಾಗಿಲ್ಲ. ಹಿಂದಿಯಲ್ಲಿ ಹೇಳು ಎಂದು ಗದರಿದ್ದಾನೆ. ಇದರಿಂದ ಆಕ್ರೋಶಗೊಂಡ ಆತ ಕನ್ನಡದಲ್ಲಿ ಮಾತನಾಡುವಂತೆ ಕೇಳಿದ್ದಾನೆ. ಆದರೆ ಹೋಟೆಲ್ ಸಿಬ್ಬಂದಿ ಕನ್ನಡ ಮಾತಾಡಲ್ಲ ಎಂದು ಜೋರು ಧ್ವನಿಯಲ್ಲೇ ಅವಾಜ್ ಹಾಕಿ, ಮಾತ್ರವಲ್ಲದೇ ಹೋಟೆಲ್‌ನಿಂದ ಹೊರಹೋಗುವಂತೆ ಕೂಗಿದ್ದಾನೆ.
ಇದರಿಂದ ಕೋಪಗೊಂಡ ಕನ್ನಡಿಗ ಮತ್ತೆ ಅಲ್ಲಿದ್ದವರ ಮುಂದೆ ಕರ್ನಾಟಕದಲ್ಲಿ ಕನ್ನಡ ಮಾತನಾಡು ಎಂದು ಕೇಳಿದ್ದಾನೆ. ಈ ವೇಳೆ ಇಬ್ಬರೂ ಪರಸ್ಪರ ಕೊರಳ ಪಟ್ಟಿ ಹಿಡಿದಿದ್ದು, ಇದರಿಂದ ಕೆರಳಿದ ಹೋಟೆಲ್ ಸಿಬ್ಬಂದಿ ತನ್ನ ಸಹೋದ್ಯೋಗಿಗಳೊಂದಿಗೆ ಸೇರಿ ಕನ್ನಡಿಗನನ್ನು ಧರಧರನೇ ಹೋಟೆಲ್ ಒಳಗೆ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ. ಕನ್ನಡಿಗ ಹಾಗೂ ಹೋಟೆಲ್‌ನಲ್ಲಿದ್ದ ಹಿಂದಿ ಸಿಬ್ಬಂದಿ ನಡುವಿನ ಗಲಾಟೆಯು ಅಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
ಮತ್ತೊಂದು ವಿಡಿಯೋ
ಇನ್ನು ಇದೇ ಘಟನೆ ಮತ್ತೊಂದು ವಿಡಿಯೋ ರಿಲೀಸ್ ಆಗಿದ್ದು, ಈ ವಿಡಿಯೋದಲ್ಲಿ ಕನ್ನಡಿಗ ಡೆಲಿವರಿ ಬಾಯ್ ನನ್ನು ಹೊಟೆಲ್ ಸಿಬ್ಬಂದಿ ಧರ ಧರನೆ ಹೊಟೆಲ್ ನೊಳಗೆ ಎಳೆದೊಯ್ಯುತ್ತಿರುವ ವಿಡಿಯೋ ದಾಖಲಾಗಿದೆ. ಅಲ್ಲದೆ ಒಳಗೆ ಒಳೆದೊಯ್ದು ಅಲ್ಲಿಂದ ಸಿಬ್ಬಂದಿಗಳೂ ಕೂಡ ಥಳಿಸಿದ್ದಾರೆ. ಬಳಿಕ ಸ್ಥಳೀಯರ ಮಧ್ಯಪ್ರವೇಶದೊಂದಿಗೆ ಆತನನ್ನು ಬಿಟ್ಟಿದ್ದಾರೆ ಎನ್ನಲಾಗಿದೆ.
ವ್ಯಾಪಕ ಆಕ್ರೋಶ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಕನ್ನಡದ ಬಗ್ಗೆ ಧ್ವನಿ ಎತ್ತಿದವನ ಕುತ್ತಿಗೆ ಪಟ್ಟಿ ಹಿಡಿದು ಹೋಟೆಲ್ ಸಿಬ್ಬಂದಿಯೆಲ್ಲ ಹಲ್ಲೆ ನಡೆಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ಪರ ಸಂಘಟನೆಗಳು ಈ ಘಟನೆಗೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ಗಬ್ರೂ ಹೊಟೆಲ್ ಎದುರು ಪ್ರತಿಭಟನೆ ಮಾಡಿ ಹೊಟೆಲ್ ಸಿಬ್ಬಂದಿ ಕೊನೆಗೂ ಕ್ಷಮೆ ಕೇಳುವಂತೆ ಮಾಡಿದ್ದಾರೆ. ಅಲ್ಲದೆ ಇನ್ನೆಂದೂ ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿಸಿದ್ದಾರೆ.
ದೂರು ದಾಖಲು
ಇನ್ನು ಕನ್ನಡಿಗನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಬ್ರೂ ಹೊಟೆಲ್ ಸಿಬ್ಬಂದಿ ವಿರುದ್ಧ ಪೊಲೀಸ್ ದೂರು ಕೂಡ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
Advertisement