
ಬೆಂಗಳೂರು: ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿಯೊಬ್ಬ ನಡುರಸ್ತೆಯಲ್ಲೇ ಪತ್ನಿಗೆ ಏಳೆಂಟು ಬಾರಿ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆನೇಕಲ್ ನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದಿದೆ.
ಇಂದು ಬೆಳಗ್ಗೆ ತನ್ನ ಆರು ವರ್ಷದ ಮಗನನ್ನು ಶಾಲೆಗೆ ಬಿಡಲು ಬಂದಿದ್ದ 29 ವರ್ಷದ ಶ್ರೀಗಂಗಾಗೆ ಪತಿ 32 ವರ್ಷದ ಮೋಹನ್ ರಾಜ್ ರಸ್ತೆ ಮಧ್ಯೆ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ದಂಪತಿಗೆ 7 ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ ಶ್ರೀಗಂಗಾ ತನ್ನ ಸ್ನೇಹಿತನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಶಂಕೆಯಿಂದಾಗಿ ಮೋಹನ್ ರಾಜ್ ಪದೇ ಪದೇ ಜಗಳವಾಡುತ್ತಿದ್ದನು. ಹೀಗಾಗಿ ಶ್ರೀಗಂಗೆ 8 ತಿಂಗಳಿನಿಂದ ಪತಿಯಿಂದ ದೂರವಾಗಿದ್ದಳು. ಆದರೆ ನಿನ್ನೆ ರಾತ್ರಿ ಮೋಹನ್ ರಾಜ್ ತನ್ನ ಮಗುವನ್ನ ನೋಡಲು ಮನೆಗೆ ಬಂದಿದ್ದ. ಆಗ ಕೂಡ ಇಬ್ಬರ ಮಧ್ಯೆ ಜಗಳವಾಗಿತ್ತು.
ಇಂದು ಪತ್ನಿಯನ್ನು ಕೊಲ್ಲಲೇಬೇಕೆಂಬ ಉದ್ದೇಶದಿಂದ ಮೋಹನ್ ರಾಜ್ ಚೂರಿ ಸಮೇತ ಬಂದಿದ್ದು ಪತ್ನಿಯ ಮೇಲೆ ಬರ್ಬರವಾಗಿ ದಾಳಿ ಮಾಡಿದ್ದಾನೆ. ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಶ್ರೀಗಂಗಾಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಹೆಬ್ಬಗೋಡಿ ಪೊಲೀಸರು ಆರೋಪಿ ಮೋಹನ್ ರಾಜ್ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Advertisement