ಆದಾಯ ತೆರಿಗೆ ವಂಚನೆ ಹಿನ್ನಲೆಯಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ 30ಕ್ಕೂ ಹೆಚ್ಚು ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಮುಂಜಾನೆ ದಿಢೀರ್ ದಾಳಿ ನಡೆಸಿದ್ದಾರೆ. ಉದ್ಯಮಿಗಳು, ಬಿಲ್ಡರ್ ಗಳ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಮೈಸೂರಿನಲ್ಲಿ ಸರ್ಕಾರದ ಗುತ್ತಿಗೆದಾರ ರಾಮಕೃಷ್ಣೇಗೌಡ ಮನೆ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇನ್ನೊಂದೆಡೆ, ಮೈಸೂರಿನಲ್ಲಿ ಕಂಟ್ರಾಕ್ಟರ್, ಇಟ್ಟಿಗೆ ಫ್ಯಾಕ್ಟರಿ ವ್ಯವಹಾರ ಮಾಡುತ್ತಿದ್ದ ರಾಮಕೃಷ್ಣ ಎಂಬುವವರ ಮನೆ-ಕಚೇರಿ ಮೇಲೆ ಐಟಿ ದಾಳಿಯಾಗಿದೆ. 10ಕ್ಕೂ ಹೆಚ್ಚು ಅಧಿಕಾರಿಗಳ ತಂಡ ರಾಮಕೃಷ್ಣ ಮನೆ ಮೇಲೆ ದಾಳಿ ನಡೆಸಿದ್ದು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಡಿಕ್ಕಿಯಾಗಿ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದಾರುಣ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿಯ ಸುರಪುರದ ತಿಂಥಣಿ ಬಳಿ ಐವರು ತೆರಳುತ್ತಿದ್ದ ಬೈಕ್ ಗೆ ಬಸ್ ಹೊಡೆದಿತ್ತು. ಅಪಘಾತದಲ್ಲಿ ಯಾದಗಿರಿಯ ಶಹಾಪುರದ ಹಳಿಸಗರ ನಿವಾಸಿಗಳಾದ ಆಂಜನೇಯ, ಗಂಗಮ್ಮ ಮತ್ತು ಅವರ ಪುತ್ರ 1 ವರ್ಷದ ಹನುಮಂತು ಮತ್ತು ಸಹೋದರನ ಮಕ್ಕಳಾದ ಪವಿತ್ರ ಮತ್ತು ರಾಯಪ್ಪ ಮೃತ ದುರ್ದೈವಿಗಳಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಸರದ ಮೇಲೆ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಗಂಭೀರ ಹಾನಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಕುಡಿಯುವ ನೀರು ಕೊಡುವಂತಿಲ್ಲ ಎಂಬ ಆದೇಶವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಪ್ಲಾಸ್ಟಿಕ್ ವಸ್ತುಗಳ ಅತಿಯಾದ ಬಳಕೆಯಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ದೃಷ್ಟಿಯಿಂದ ಸಚಿವಾಲಯ ಸೇರಿದಂತೆ ರಾಜ್ಯಾದ್ಯಾಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ, ಸರ್ಕಾರಿ ಸೌಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು, ಸರ್ಕಾರದ ಅನುದಾನಿ ಸಂಸ್ಥೆಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಕೆಯನ್ನು ನಿಷೇಧಿಸಲಾಗಿದೆ.
ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಎರಡು ಕೊಲೆಗಳಾಗಿವೆ. ತನ್ನ ಸ್ನೇಹಿತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಆರೋಪಿಸಿ ಮೋಹನ್ ರಾಜ್ ಎಂಬಾತ ಪತ್ನಿ ಶ್ರೀಗಂಗಾಳನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆನೇಕಲ್ ನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ಪೊಲೀಸರು ಮೋಹನ್ ರಾಜ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ತಾನು ಕೆಲಸಕ್ಕೆ ಹೋಗಿದ್ದಾಗ ಪರಪುರುಷರ ಜೊತೆ ಕಾಲ ಕಳೆಯುತ್ತಾಳೆ ಎಂದು ಶಂಕಿಸಿ ನಿಜಾಮುದ್ದೀನ್ ಎಂಬಾತ ತನ್ನ ಪತ್ನಿ ರಬಿಯಾಳನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದು ನಂತರ ಸೂಲಿಬೆಲೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಪೇಂಟ್‌ನಲ್ಲಿ ಬಳಸುವ ಥಿನ್ನರ್ ಸೇವಿಸಿ ಬಾಲಕ ಸಾವನ್ನಪ್ಪಿರುವಂತಹ ಘಟನೆ ರಾಯಚೂರಿನ ಮಾನ್ವಿಯ ಹಿರೆಕೊಟ್ನೇಕಲ್‌ನಲ್ಲಿ ನಡೆದಿದೆ. ರಮೇಶ್ ನಾಯಕ್ ಎಂಬುವರ ಪುತ್ರ 3 ವರ್ಷದ ಶಿವಾರ್ಜುನ ನಾಯಕ್ ಆಕಸ್ಮಿಕವಾಗಿ ಥಿನ್ನರ್ ಅನ್ನು ಸೇವಿಸಿದ್ದಾನೆ. ಈ ವೇಳೆ ಶಿವಾರ್ಜುನ ತೀವ್ರವಾಗಿ ಅಸ್ವಸ್ಥಗೊಂಡಿದ್ದು ಕೂಡಲೇ ಸ್ಥಳೀಯ ಮಾನ್ವಿ ಖಾಸಗಿ ಆಸ್ಪತ್ರೆಗೆ ಪೋಷಕರು ಬಾಲಕನನ್ನು ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶಿವಾರ್ಜುನ ಮೃತಪಟ್ಟಿದ್ದಾನೆ. ಜಾತ್ರೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿದೀಗ ಸೂತಕದ ಛಾಯೆ ಆವರಿಸಿದೆ.
Advertisement