
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಪುಡಿರೌಡಿಗಳ ಅಟ್ಟಹಾಸ ಮುಂದುವರೆದಿದ್ದು, ಅಂಗಡಿ ಸಿಬ್ಬಂದಿಗೆ ಚಾಕು ತೋರಿಸಿ ಸಿಗರೇಟ್ ವಸೂಲಿ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಆಡುಗೋಡಿಯ ರಾಜೇಂದ್ರ ನಗರದ 80 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಪೆಟ್ಟಿಗೆ ಅಂಗಡಿ ವ್ಯಾಪಾರಿಯೊಬ್ಬರಿಗೆ ಚಾಕು ತೋರಿಸಿ, ಹೆದರಿಸಿ ಪುಡಿರೌಡಿಯೋರ್ವ ಉಚಿತವಾಗಿ ಸಿಗರೇಟ್ ಪ್ಯಾಕೆಟ್ ಪಡೆದಿದ್ದಾನೆ. ಆರೋಪಿಯನ್ನು ಗೌತಮ್ ಎಂದು ಗುರುತಿಸಲಾಗಿದ್ದು, ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ಕೆಲವು ದಿನಗಳ ಹಿಂದೆ ಆಡುಗೋಡಿಯ ರಾಜೇಂದ್ರ ನಗರದ 80 ಅಡಿ ರಸ್ತೆಯ ಪೆಟ್ಟಿಗೆ ಅಂಗಡಿಗೆ ಬಂದ ಗೌತಮ್, ಒಂದು ಪ್ಯಾಕ್ ಸಿಗರೇಟ್ ಮತ್ತು ಬೆಂಕಿ ಪೊಟ್ಟಣ ಪಡೆದುಕೊಂಡಿದ್ದ. ವ್ಯಾಪಾರಿ ಹಣ ಕೇಳಿದಾಗ, ನಾನು ಯಾರು ಗೊತ್ತಾ? ನನ್ನ ಬಳಿಯೇ ಹಣ ಕೇಳುತ್ತೀಯಾ? ನಾನು ಕೇಳುವುದನ್ನು ಕೊಡಬೇಕು ಎಂದು ಚಾಕು ತೋರಿಸಿ ಬೆದರಿಕೆ ಹಾಕಿದ್ದ. ಗೌತಮ್ ಹೆದರಿಸುತ್ತಿರುವ ಮತ್ತು ಮಾಲೀಕ ಸಿಗರೇಟ್ ನೀಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಇದರ ಜತೆಗೆ ಅಂಗಡಿ ಮಾಲೀಕ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಮತ್ತು ವಿಡಿಯೋ ಪರಿಶೀಲಿಸಿ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಬಳಿಯಿದ್ದ ಒಂದೂವರೆ ಅಡಿ ಉದ್ದದ ಚಾಕುವನ್ನು ಕೂಡ ವಶಪಡಿಸಿಕೊಂಡಿದ್ದಾರೆ.
Advertisement