
ಬೆಂಗಳೂರು: ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಭಾನುವಾರ ದೊಡ್ಡ ಹೈಡ್ರಾಮಾ ನಡೆದಿದ್ದು ಜನಪ್ರಿಯ ಅಂತಾರಾಷ್ಟ್ರೀಯ ಗಾಯಕ ಹಾಗೂ ಗೀತರಚನೆಕಾರ ಎಡ್ ಶೀರನ್ ಅವರ ಸ್ಟ್ರೀಟ್ ಮ್ಯೂಸಿಕ್ ಕಾರ್ಯಕ್ರಮವನ್ನು ಪೊಲೀಸರು ತಡೆದಿದ್ದಾರೆ.
ಹೌದು.. ಗ್ರ್ಯಾಮಿ ಪ್ರಶಸ್ತಿ ವಿಜೇತ ಗಾಯಕ ಹಾಗೂ ಗೀತರಚನೆಕಾರ ಎಡ್ ಶೀರನ್ ಅವರ ಸ್ಟ್ರೀಟ್ ಮ್ಯೂಸಿಕ್ ಕಾರ್ಯಕ್ರಮಕ್ಕೆ ಬೆಂಗಳೂರು ಪೊಲೀಸರು ಅಡ್ಡಿ ಪಡಿಸಿದ್ದು, ಎಲ್ಲ ಸಿಬ್ಬಂದಿಗಳನ್ನು ವಾಪಸ್ ಕಳುಹಿಸಿದ್ದಾರೆ.
ಮೂಲಗಳ ಪ್ರಕಾರ ಚರ್ಚ್ ಸ್ಟ್ರೀಟ್ ನಲ್ಲಿ ಇಂದು ಮಧ್ಯಾಹ್ನ ಗಾಯಕ ಎಡ್ ಶೀರನ್ ಚಾರ್ಟ್‌ಬಸ್ಟರ್ ಶೇಪ್ ಆಫ್ ಯು ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರು. ಈ ವೇಳೆ ಶೀರನ್ ಮತ್ತು ಅವರ ಸಿಬ್ಬಂದಿ ಸಂಗೀತ ಹಾಡುತ್ತಿದ್ದಾಗಲೇ ಸ್ಥಳಕ್ಕಾಗಮಿಸಿದ ಪೊಲೀಸರು ಅವರ ಕಾರ್ಯಕ್ರಮವನ್ನು ತಡೆದಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಈ ಕುರಿತು ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿರುವ ಎಡ್ ಶೀರನ್, 'ನಾವು ಒಂದಕ್ಕಿಂತ ಹೆಚ್ಚು ಹಾಡುಗಳನ್ನು ನುಡಿಸಲಿದ್ದೆವು.. ಆದರೆ ನಮಗೆ ಒಂದು ಹಾಡನ್ನು ನುಡಿಸಲು ಕೇಳಲಾಗುತ್ತಿದೆ" ಎಂದು ಮೈಕ್ರೊಫೋನ್‌ನಲ್ಲಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಒಬ್ಬ ಪೊಲೀಸ್ ಒಳಗೆ ಬಂದು ಮೈಕ್ರೊಫೋನ್ ಮತ್ತು ಸಂಗೀತ ವಾದ್ಯಗಳಿಗೆ ಜೋಡಿಸಲಾದ ಕೇಬಲ್‌ಗಳನ್ನು ಕಿತ್ತು ಹಾಕಿದರು.
ಅನುಮತಿ ಇಲ್ಲ..
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಎಡ್ ಶೀರನ್ "ಯಾವುದೇ ಪೂರ್ವಾನುಮತಿಯಿಲ್ಲದೆ ಸಂಗೀತ ಪ್ರದರ್ಶನ ನೀಡುತ್ತಿದ್ದರು. ಆದ್ದರಿಂದ ಅವರು ನಿಲ್ಲಿಸಬೇಕಾಯಿತು. ಅನುಮತಿ ಇಲ್ಲದೇ ಸಂಗೀತ ಕಾರ್ಯಕ್ರಮ ನಡೆಸುವುದು ಸರಿಯಲ್ಲ. ಸಾರ್ವಜನಿಕ ತೊಂದರೆ ಇದೆ ಎಂದು ಯಾರೋ ದೂರು ನೀಡಿದ್ದರಿಂದ ಪೊಲೀಸರು ಅಲ್ಲಿಗೆ ಬಂದರು, ಸಂಗೀತಗಾರ ಮತ್ತು ಅವರ ತಂಡಕ್ಕೆ ಪರವಾನಗಿ ಇದ್ದಿದ್ದರೆ ಅವರು ಅದನ್ನು ಪೊಲೀಸರಿಗೆ ತೋರಿಸಬಹುದಿತ್ತು ಎಂದು ಹೇಳಿದರು.
ಅಂದಹಾಗೆ ಚರ್ಚ್ ಸ್ಟ್ರೀಟ್ ಬೆಂಗಳೂರಿನ ಜನನಿಬಿಡ ಪ್ರದೇಶವಾಗಿದ್ದು, ಇದು ರಾತ್ರಿಜೀವನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ.
Advertisement