
ಬೆಂಗಳೂರು: ಬೆಂಗಳೂರಿಗರ ಅಚ್ಚುಮೆಚ್ಚಿನ ಸಾರಿಗೆ ವ್ಯವಸ್ಥೆ ನಮ್ಮ ಮೆಟ್ರೋ ರೈಲು ಪ್ರಯಾಣ ದರ ಏರಿಕೆಗೆ ಪ್ರಯಾಣಿಕರು ಆಘಾತ ವ್ಯಕ್ತಪಡಿಸಿದ್ದು, ದುಪ್ಪಟ್ಟಲ್ಲ.. ಅದಕ್ಕಿಂತಲೂ ಹೆಚ್ಚು ದರ ಏರಿಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬಸ್ ಪ್ರಯಾಣ ದರ ಬೆಲೆ ಏರಿಕೆ ಬೆನ್ನಲ್ಲೇ ಮೆಟ್ರೋ ರೈಲು ಪ್ರಯಾಣದರ ಶೇ.46 ರಷ್ಟು ಏರಿಕೆಯಾಗಿರುವುದಕ್ಕೆ ಪ್ರಯಾಣಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟೊಂದು ಪ್ರಮಾಣದ ಪ್ರಯಾಣದರ ಏರಿಕೆ ಮಾಡಿರುವುದು ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ. ಈಗಾಗಲೇ ಹಾಲು, ವಿದ್ಯುತ್, ಬಸ್ ಪ್ರಯಾಣದರ, ದಿನನಿತ್ಯದ ವಸ್ತುಗಳ ದರ, ಹಣ್ಣು-ತರಕಾರಿ ಬೆಲೆಗಳು ಗಗನ ಮುಟ್ಟುತ್ತಿವೆ. ಈಗ ಮತ್ತೆ ಮೆಟ್ರೋ ದರವನ್ನು ಕೂಡ ಶೇ.46 ರಷ್ಟು ಏರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
'ದುಪ್ಪಟ್ಟಲ್ಲ.. ಅದಕ್ಕಿಂತಲೂ ಹೆಚ್ಚು ದರ ಏರಿಕೆ'
ಕೆಲ ಪ್ರಯಾಣಿಕರಂತೂ ದುಪ್ಪಟ್ಟಲ್ಲ.. ಕೆಲ ಮಾರ್ಗಗಳಲ್ಲಿ ಶೇ.80ರವರೆಗೂ ದರ ಏರಿಕೆಯಾಗಿದೆ. ಟೋಕನ್ ಮೂಲಕ ಪ್ರಯಾಣ ಮಾಡುವ ಪ್ರಯಾಣಿಕರಿಗೆ 50% ರಷ್ಟು ದರ ಹೆಚ್ಚಳವಾದ್ರೆ, ಸ್ಮಾರ್ಟ್ ಕಾರ್ಡ್ ಮೂಲಕ ಪ್ರಯಾಣ ಮಾಡುವ ಪ್ರಯಾಣಿಕರಿಗೆ 45% ರಷ್ಟು ಹೆಚ್ಚಳವಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಆದ್ರೆ, ಟಿಕೆಟ್ ದರ ಒಂದಕ್ಕೆ ಎರಡರಷ್ಟು ಏರಿಕೆಯಾಗಿದೆ ಎಂದು ಪ್ರಯಾಣಿಕರು ಗರಂ ಆಗಿದ್ದಾರೆ.
ದರ ಓನ್ ಟು ಡಬಲ್ ಏರಿಕೆ, ನಾಳೆಯಿಂದ ಬರಲ್ಲ..
ಮೆಟ್ರೋ ಟಿಕೆಟ್ ದರ ಒಂದಕ್ಕೆ ಎರಡರಷ್ಟು ಏರಿಕೆಯಾಗಿದೆ ಎಂದು ಕೆಲ ಪ್ರಯಾಣಿಕರು ಗರಂ ಆಗಿದ್ದು, 'ನಾನು ಪ್ರತಿದಿನ ಮೂರ್ನಾಲ್ಕು ಬಾರಿ ಮೆಟ್ರೋದಲ್ಲಿ ಪ್ರಯಾಣಿಸುತ್ತೇನೆ. ದರ ಏರಿಕೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.. ನಾಳೆಯಿಂದ ಮೆಟ್ರೋದಲ್ಲಿ ಬರಲ್ಲ.. ಬಸ್ ನಲ್ಲಿ ಬರುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆನ್ನಿಗಾನಹಳ್ಳಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ನಿಲ್ದಾಣ ( ವಿಧಾನಸೌಧಕ್ಕೆ ) ಕಳೆದ ಭಾನುವಾರ 26.6 ರುಪಾಯಿ ಇತ್ತು. ಈ ವಾರ ಬರೋಬ್ಬರಿ 60 ರುಪಾಯಿ ಆಗಿದೆ ಎಂದು ದಾಖಲೆ ಸಮೇತ ಪ್ರಯಾಣಿಕರೊಬ್ಬರು ಮೆಟ್ರೋ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 'ಓನ್ ಟು ಡಬಲ್ ದರ ಹೆಚ್ಚಳ ಮಾಡಿದ್ದಾರೆ. ನಾನು ಪ್ರತಿವಾರ ಬೆನ್ನಿಗಾನಹಳ್ಳಿಯಿಂದ ಕಬ್ಬನ್ ಪಾರ್ಕ್ ಗೆ ಬರುತ್ತೇನೆ. ಕಳೆದ ಭಾನುವಾರ ಆನ್ಲೈನ್ ಮೂಲಕ ಟಿಕೆಟ್ ತಗೊಂಡಿದ್ದೆ 26 ರುಪಾಯಿ ಇತ್ತು. ಈ ವಾರ 60 ರುಪಾಯಿ ತಗೊಂಡ್ರು .ಇದು ಸರಿಯಲ್ಲ. ಇಷ್ಟೊಂದು ಏರಿಕೆ ಮಾಡಿದ್ರೆ ಕಷ್ಟ ಆಗುತ್ತದೆ ಎಂದು ಕಿಡಿಕಾರಿದರು.
QR ಟಿಕೆಟ್ ರಿಯಾಯಿತಿ ಕೂಡ ರದ್ದು?
ಮತ್ತೆ ಕೆಲ ಪ್ರಯಾಣಿಕರು QR ಟಿಕೆಟ್ ರಿಯಾಯಿತಿ ಕೂಡ ರದ್ದು ಮಾಡಲಾಗಿದೆ ಎಂದು ಆರೋಪಿಸಿದ್ದು, QR ಟಿಕೆಟ್ ಖರೀದಿಸಿದಾಗ ಸಿಗುತ್ತಿದ್ದ ಶೇ.5ರಷ್ಟು ರಿಯಾಯಿತಿಯನ್ನು ಕೂಡ ತೆಗೆದುಹಾಕಲಾಗಿದೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರಿ ಪ್ರಮಾಣದಲ್ಲಿ ದರ ಏರಿಕೆ
ಇನ್ನು 2017 ರಿಂದ ಮೆಟ್ರೋ ದರ ಏರಿಕೆ ಮಾಡಿರಲಿಲ್ಲ. ಈಗ ದರ ಏರಿಕೆ ಮಾಡಲಾಗಿದೆ. ಇಷ್ಟು ಪ್ರಮಾಣದ ದರ ಏರಿಕೆ ಅಗತ್ಯವಿತ್ತೇ? ಎಂದು ಜನ ತಮ ಅಸಹನೆಯನ್ನು ಹೊರಹಾಕಿದ್ದಾರೆ. ಟಿನ್ ಫ್ಯಾಕ್ಟರಿಯಿಂದ ಅಂಬೇಡ್ಕರ್ ನಿಲ್ದಾಣಕ್ಕೆ ಪ್ರತಿ ದಿನ 30 ರೂ. ಕೊಟ್ಟು ಓಡಾಡುತ್ತಿದ್ದ ಪ್ರಯಾಣಿಕರು ಇಂದು ಏಕಾಏಕಿ 60 ರೂ.ಗಳನ್ನು ಕೊಡಬೇಕಾಗಿದೆ. ಶೇ.5ರಷ್ಟು ಪ್ರಯಾಣ ದರ ಏರಿಸಿದರೆ ಪರವಾಗಿಲ್ಲ. ಆದರೆ ಶೇ.45, 50 ರಷ್ಟು ಪ್ರಯಾಣ ದರ ಏರಿಸಿದರೆ ಹೇಗೆ ನಾವು ಪ್ರಯಾಣಿಸುವುದು ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಷ್ಟು ಪ್ರಮಾಣದ ದರ ಏರಿಕೆ ಅಗತ್ಯವಿತ್ತೇ?
ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಖಾಸಗಿ ನೌಕರರು ಸೇರಿದಂತೆ ಲಕ್ಷಾಂತರ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಪ್ರತಿದಿನದ ಪಾಸ್ ಪಡೆದು ಪ್ರಯಾಣಿಸುವವರು ಹಲವರಿದ್ದಾರೆ. ಮಾಸಿಕ ಪಾಸ್ ಪಡೆದು ಹಲವರು ಪ್ರಯಾಣಿಸುತ್ತಾರೆ. ಎಲ್ಲದರ ದರವೂ ಏರಿಕೆಯಾಗಿದೆ. ಇಷ್ಟು ಪ್ರಮಾಣದ ದರ ಏರಿಕೆ ಅಗತ್ಯವಿತ್ತೇ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಮೆಟ್ರೋ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತವೆ. ಯಾವುದೇ ನಷ್ಟ ಏನೂ ಉಂಟಾಗಿಲ್ಲ. ಲಾಭದ ಹಾದಿಯಲ್ಲಿ ಮೆಟ್ರೋ ಓಡುತ್ತಿದೆ. ಹಾಗಿದ್ದರೂ ದರ ಏರಿಕೆಯನ್ನು ಏಕೆ ಮಾಡಬೇಕಾಗಿತ್ತು ಎಂದು ಹಲವು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಪ್ರತಿದಿನ ಮೆಟ್ರೋದಲ್ಲಿ ಸಂಚರಿಸುವ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ದರ ಏರಿಕೆಯಿಂದ ಬೇಸರಗೊಂಡು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.
Advertisement