
ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಕುರಿತು ತಮ್ಮ ಟ್ವೀಟ್ ಸರಣಿ ಮುಂದುವರೆಸಿರುವ ಸಚಿವ ಪ್ರಿಯಾಂಕ್ ಖರ್ಗೆ, 'ಉತ್ತರ ಪ್ರದೇಶದ ಶೇ. 12 ರಷ್ಟು ರೋಗಗಳಿಗೆ ಕಲುಷಿತ ಗಂಗಾ ನದಿ ನೀರು ಕಾರಣವಂತೆ' ಎಂದು ಹೇಳಿದ್ದಾರೆ.
ಈ ಹಿಂದೆ ಕುಂಭಮೇಳದ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದರು. ಈ ಟೀಕೆ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹಾಕುಂಭಮೇಳದಲ್ಲಿ ಪಾಲ್ಗೊಂಡು ಪವಿತ್ರ ಸ್ನಾನ ಮಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಮತ್ತೆ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನಾಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕಾ ಪ್ರಹಾರಗಳು ವ್ಯಕ್ತವಾಗುತ್ತಿವೆ.
ಈ ಬೆಳವಣಿಗೆ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ, ಟ್ವೀಟ್ ಮಾಡಿ ಗಂಗಾ ನದಿ ಅತ್ಯಂತ ಕಲುಷಿತವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಕಲುಷಿತ ನೀರಿನಲ್ಲೇ ಭಕ್ತರು ಸ್ನಾನ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. 'ಇದು ನಾವು ಗಂಗೆಯನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎಂಬುದರ ವಾಸ್ತವ. “ನಮಾಮಿ ಗಂಗೆ” ಎಂಬುದು ಕೇವಲ ಬಜೆಟ್ ಹಂಚಿಕೆಗಳಿಗೇ ಸೀಮಿತವಾಗಿದೆ. ಕುಂಭಮೇಳವು ಚುನಾವಣಾ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ, 'ಕೆಲವು ವರ್ಷಗಳ ಹಿಂದೆ ನಡೆಸಿದ ಅಧ್ಯಯನವು ಉತ್ತರ ಪ್ರದೇಶದಲ್ಲಿನ ಶೇ.12%ರಷ್ಟು ರೋಗಗಳಿಗೆ ಕಲುಷಿತ ಗಂಗಾನದಿ ನೀರು ಕಾರಣವಾಗಿದೆ ಎಂದು ಬಹಿರಂಗಪಡಿಸಿದೆ. ಗಂಗಾ ಜಲಾನಯನ ಪ್ರದೇಶವು 11 ರಾಜ್ಯಗಳನ್ನು ವ್ಯಾಪಿಸಿದ್ದು, ಭಾರತದ ಭೂಪ್ರದೇಶದ ಕಾಲು ಭಾಗವನ್ನು ಒಳಗೊಂಡಿದೆ. ಇದು ಭಾರತದ ಬಡ ಸಮುದಾಯಗಳಲ್ಲಿ ಮೂರನೇ ಎರಡರಷ್ಟು ಸೇರಿದಂತೆ ದೇಶದ ಜನಸಂಖ್ಯೆಯ 40% ಕ್ಕಿಂತ ಹೆಚ್ಚು ಜನರಿಗೆ ಬೆಂಬಲ ನೀಡುತ್ತದೆ. ಹೆಚ್ಚುವರಿಯಾಗಿ, ಇದು ಭಾರತದ ಮೇಲ್ಮೈ ನೀರಿನ 1/3 ಕ್ಕಿಂತ ಹೆಚ್ಚು ನೀರು ಪೂರೈಸುತ್ತದೆ ಮತ್ತು ದೇಶದ ಅತಿದೊಡ್ಡ ನೀರಾವರಿ ಪ್ರದೇಶವನ್ನು ಒಳಗೊಂಡಿದೆ. ಆದಾಗ್ಯೂ ಈ ರೀತಿಯಾಗಿ ನಾವು ನಮ್ಮ ಜೀವಸೆಲೆಯನ್ನು ರಕ್ಷಿಸುತ್ತಿದ್ದೇವೆ' ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
Advertisement