
ಬೆಂಗಳೂರು: ಭಾರತದತ್ತ ಎದುರು ನೋಡುತ್ತಿರುವ ತಂತ್ರಜ್ಞಾನ ಕೇಂದ್ರಗಳಿಗೆ ಬೆಂಗಳೂರನ್ನು ಜಾಗತಿಕ ಹಬ್ ಆಗಿ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಬುಧವಾರ ಹೇಳಿದ್ದಾರೆ.
ಇನ್ವೆಸ್ಟ್ ಕರ್ನಾಟಕ-2025 ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಪಿಯೂಷ್ ಗೋಯೆಲ್, ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ 100 ಹೊಸ ಕೈಗಾರಿಕಾ ಕೇಂದ್ರಗಳನ್ನು ಘೋಷಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಹಲವಾರು ಕೈಗಾರಿಕಾ ಕೇಂದ್ರಗಳನ್ನು ರಚಿಸುವತ್ತಾ ಕೆಲಸ ಮಾಡುವಂತೆ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರನ್ನು ಒತ್ತಾಯಿಸಿದರು.
ಕಲಬುರಗಿಯಲ್ಲಿ ಕಳೆದ ವರ್ಷ ಮಂಜೂರಾದ ಪಿಎಂ ಮಿತ್ರ ಪಾರ್ಕ್ ಜೊತೆಗೆ ಇದನ್ನು ಮಾಡಬಹುದು ಎಂದು ಹೇಳಿದರು.
ಕರ್ನಾಟಕ ವಿಶೇಷವಾಗಿ ಬೆಂಗಳೂರು ಹೆಚ್ಚಿನ ಸಂಖ್ಯೆಯ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಹೊಂದಿದೆ ಮತ್ತು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನವು ಬರಲಿವೆ. ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡಕ್ಟರ್ ಉದ್ಯಮ, ಬಾಹ್ಯಾಕಾಶ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಉದ್ಯಮವನ್ನು ಉತ್ತೇಜಿಸಲು ನಾವು ಕೆಲಸ ಮಾಡಬೇಕಾಗಿದೆ. ಇದರಿಂದ ನಾವು ಒಟ್ಟಾಗಿ ಪ್ರಗತಿಯಲ್ಲಿ ಪಾಲುದಾರರಾಗಿ ಕೆಲಸ ಮಾಡಬಹುದು. ಭಾರತಕ್ಕೆ ಬರಲು ಎದುರು ನೋಡುತ್ತಿರುವ ತಂತ್ರಜ್ಞಾನ ಕ್ಷೇತ್ರಗಳ ಜಾಗತಿಕ ಕೇಂದ್ರವಾಗಿ ಬೆಂಗಳೂರನ್ನು ರೂಪಿಸುವ ಗುರಿಯನ್ನು ನಾವು ಹೊಂದಬೇಕು ಎಂದು ತಿಳಿಸಿದರು.
ಜಾಗತಿಕವಾಗಿ ಕರ್ನಾಟಕ ಬೆಳವಣಿಗೆಗೆ ಕೇಂದ್ರ ಸರ್ಕಾರ ಆಧಾರ ಸ್ತಂಭವಾಗಿ ನಿಲ್ಲುತ್ತದೆ ಎಂದು ಹೇಳಿದ ಸಚಿವರು ತುಮಕೂರಿನಲ್ಲಿ ಇಂಡಸ್ಟ್ರೀಯಲ್ ಸ್ಮಾರ್ಟ್ ಸಿಟಿ ಘೋಷಣೆಯನ್ನು ನೆನಪಿಸಿಕೊಂಡರು. ವಿಶ್ವ ದರ್ಜೆಯ ಟೌನ್ ಶಿಪ್ ಆಗಿ ಅಭಿವೃದ್ಧಿ ಪಡಿಸಲಾಗುವುದು. ಇದರ ಮೊದಲ ಹಂತವು 1,736 ಎಕರೆಗಳನ್ನು ಒಳಗೊಂಡಿದ್ದು, ಈಗಾಗಲೇ ಕೆಲಸ ಪ್ರಾರಂಭವಾಗಿದೆ ಮತ್ತು ಮುಂದಿನ ವರ್ಷದ ಅಂತ್ಯದ ವೇಳೆಗೆ ಮೊದಲ ಹಂತವು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
ಹಂಪಿಯನ್ನು ಅದ್ಭುತ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಅವರು ಸಲಹೆ ನೀಡಿದರು.
Advertisement