
ಬೆಂಗಳೂರು: ಭಾರತವು ಕ್ರಾಂತಿಕಾರಿ ಬದಲಾವಣೆಯ ಹಂತದಲ್ಲಿ ಸಾಗುತ್ತಿದ್ದು, ದೇಶದ ಯುದ್ಧ ವಿಮಾನಗಳು, ಕ್ಷಿಪಣಿ ವ್ಯವಸ್ಥೆಗಳು, ನೌಕಾ ಪಡೆಯ ನೌಕೆಗಳು ನಮ್ಮ ಗಡಿಯನ್ನು ರಕ್ಷಿಸುವುದಲ್ಲದೆ ಇಡೀ ವಿಶ್ವದ ಆಕರ್ಷಣೆಯ ಕೇಂದ್ರವಾಗುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದ್ದಾರೆ.
ಏರೋ ಇಂಡಿಯಾ 2025ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರಕ್ಷಣಾ ಸಚಿವರು, ದೇಶದ ಸಶಸ್ತ್ರ ಪಡೆಗಳು ದೇಶಿಯವಾಗಿ ತಯಾರಿಸಿದ ರಕ್ಷಣಾ ಉತ್ಪನ್ನಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಎಂದರು.
"ಏರೋ ಇಂಡಿಯಾ ಹೊಲಿಸಲಾಗದಂತಹ ಆದರೆ ಐತಿಹಾಸಿಕವಾದ ಅಪ್ರತಿಮವಾದ ಎತ್ತರವನ್ನು ತಲುಪಿದೆ. ಕಳೆದ ಮೂರು ದಿನಗಳಿಂದ ನಾನೇ ಖುದ್ದಾಗಿ ಹಾಜರಿದ್ದ ಕಾರ್ಯಕ್ರಮದಲ್ಲಿನ ನನ್ನ ಅನುಭವವನ್ನು ಮೂರು ಪದಗಳಲ್ಲಿ ಹೇಳುವುದಾದರೆ ಅದು ಶಕ್ತಿ, ಶಕ್ತಿ ಮತ್ತು ಶಕ್ತಿ ಎಂದು ಹೇಳಿದರು.
"ಯಲಹಂಕದಲ್ಲಿ ನಾವು ಏನನ್ನು ನೋಡಬಹುದೋ ಅದು ಶಕ್ತಿಯ ದ್ಯೋತಕವಾಗಿದೆ. ಆ ಶಕ್ತಿ ಮತ್ತು ಉತ್ಸಾಹವನ್ನು ಭಾರತದಿಂದ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಭಾಗವಹಿಸುವವರಲ್ಲಿ ಕಾಣಬಹುದು. ನಮ್ಮ ಉದ್ಯಮಿಗಳು, ನಮ್ಮ ಸ್ಟಾರ್ಟ್ ಅಪ್ ಗಳು ಮತ್ತು ನವೋದ್ಯಮಿಗಳಲ್ಲಿ ಕಂಡುಬರುವ ಉತ್ಸಾಹವು ಶ್ಲಾಘನೀಯವಾಗಿದೆ. ದಶಕದ ಹಿಂದೆ ನಮ್ಮ ದೇಶಕ್ಕೆ ಶೇ. 65 ರಿಂದ 70 ರಷ್ಟು ರಕ್ಷಣಾ ಸಾಧನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದೇವು. ಆದರೆ ಇಂದು ದೇಶದಲ್ಲಿ ಅದೇ ಶೇಕಡಾವಾರು ರಕ್ಷಣಾ ಸಾಧನಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಅವರು ಹೇಳಿದರು.
ಫೈಟರ್ ಜೆಟ್‌ಗಳು, ಕ್ಷಿಪಣಿ ವ್ಯವಸ್ಥೆಗಳು, ನೌಕಾ ಪಡೆಯ ನೌಕೆಗಳು ಅಥವಾ ಅಂತಹ ಹಲವಾರು ಉಪಕರಣಗಳು ಭಾರತದ ಗಡಿಗಳನ್ನು ರಕ್ಷಿಸುವುದಲ್ಲದೆ, ಇಡೀ ಪ್ರಪಂಚದ ಆಕರ್ಷಣೆಯ ಕೇಂದ್ರವಾಗುತ್ತಿವೆ. ಇದು ನಮ್ಮ ರಕ್ಷಣಾ ರಫ್ತುಗಳನ್ನು ಹೆಚ್ಚಿಸುವುದಲ್ಲದೆ, ವಿವಿಧ ದೇಶಗಳೊಂದಿಗಿನ ನಮ್ಮ ಹೊಸ ಪಾಲುದಾರಿಕೆಯನ್ನು ಬಲಪಡಿಸುತ್ತಿದೆ. ಇಂದು ದೇಶವು 16 ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು, 430 ಪರವಾನಗಿ ಪಡೆದ ಕಂಪನಿಗಳು ಮತ್ತು ಸುಮಾರು 16,000 MSME ಒಳಗೊಂಡಿರುವ ಪ್ರಬಲ ರಕ್ಷಣಾ ಕೈಗಾರಿಕಾ ಸಂಕೀರ್ಣವನ್ನು ಹೊಂದಿದೆ. ಪ್ರಸ್ತುತ ಒಟ್ಟು ರಕ್ಷಣಾ ಉತ್ಪಾದನೆಯಲ್ಲಿ ಶೇ. 21 ರಷ್ಟು ಕೊಡುಗೆಯೊಂದಿಗೆ ಸ್ವಾವಲಂಬನೆ ಗುರಿ ಸಾಧಿಸುವಲ್ಲಿ ಖಾಸಗಿ ವಲಯಗಳು ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂದು ತಿಳಿಸಿದರು.
ಅನಿಶ್ಚಿತತೆಗಳನ್ನು ಹೋಗಲಾಡಿಸಿ ಖಾಸಗಿ ವಲಯಕ್ಕೆ ಸಮಬಲ ಒದಗಿಸುವುದು ಮೊದಲಿನಿಂದಲೂ ಸರ್ಕಾರದ ಪ್ರಯತ್ನವಾಗಿದೆ. ಸರ್ಕಾರವು ನಿರಂತರವಾಗಿ ಇಂತಹ ನೀತಿಗಳನ್ನು ತರುತ್ತಿದೆ, ಇದರಿಂದ ಸಾರ್ವಜನಿಕ ವಲಯವು ರಕ್ಷಣಾ ಉತ್ಪಾದನೆಯಲ್ಲಿ ಮುಂದುವರಿಯುತ್ತದೆ, ಆದರೆ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯ ಎರಡೂ ಒಟ್ಟಿಗೆ ಮುನ್ನಡೆಯುತ್ತದೆ ಎಂದು ಅವರು ಹೇಳಿದರು.
ಪರಿವರ್ತನಾ ಯುಗದಲ್ಲಿ ಭಾರತ ಈಗ ಕೇವಲ ಪಾಲ್ಗೊಳ್ಳುವವರಲ್ಲದೇ ರಕ್ಷಣಾ ಆವಿಷ್ಕಾರ ಮತ್ತು ಏರೋಸ್ಪೇಸ್ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಜಾಗತಿಕ ನಾಯಕನಾಗುವತ್ತ ಸಾಗುತ್ತಿದೆ. ಏರೋ ಇಂಡಿಯಾದ ಪ್ರಭಾವವು ಬಹಳ ಕಾಲ ಉಳಿಯುತ್ತದೆ ಎಂದು ತಿಳಿಸಿದ ರಕ್ಷಣಾ ಸಚಿವರು, ಏರೋ ಇಂಡಿಯಾ ಶೋನಲ್ಲಿ ಪಾಲ್ಗೊಂಡ ವಿದೇಶಿ ಅತಿಥಿಗಳು, ರಕ್ಷಣಾ ಸಚಿವರು, ಸೇವಾ ಮುಖ್ಯಸ್ಥರು ಸೇರಿದಂತೆ 84 ದೇಶಗಳ 500 ಕ್ಕೂ ಹೆಚ್ಚು ಪ್ರತಿನಿಧಿಗಳು,
782 ಭಾರತೀಯರು ಸೇರಿದಂತೆ 931 ಪ್ರದರ್ಶಕರಿಗೆ ಧನ್ಯವಾದ ಹೇಳಿದರು. ಈ ಬಾರಿ ಐವತ್ತೆಂಟು ಮೂಲ ಸಲಕರಣೆ ತಯಾರಕರು ಮತ್ತು 115 ಜಾಗತಿಕ ಸಿಇಒಗಳು ಏರೋ ಇಂಡಿಯಾದಲ್ಲಿ ಭಾಗವಹಿಸಿರುವುದಾಗಿ ತಿಳಿಸಿದರು.
ಏರೋ ಇಂಡಿಯಾದ 15 ನೇ ಆವೃತ್ತಿಯ ಮೂರು ವ್ಯವಹಾರ ದಿನಗಳು ಫೆಬ್ರವರಿ 12 ರಂದು ಕೊನೆಯಾಗಿದ್ದು, ಮುಂದಿನ ಎರಡು ದಿನಗಳು ಏರೋ ಶೋವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.
Advertisement