
ಬೆಂಗಳೂರು: ಈ ವರ್ಷದ ಡಿಸೆಂಬರ್ ವೇಳೆಗೆ ಈಜಿಪುರ ಮೇಲ್ಸೇತುವೆ ಯೋಜನೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಂಗಳವಾರ ಭರವಸೆ ನೀಡಿದರು.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಮಂಗಳವಾರ ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಪ್ರತಿದಿನ ಕಾಮಗಾರಿ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ನಾನೂ ನಿಯಮಿತವಾಗಿ ಪ್ರಗತಿಯನ್ನು ಪರಿಶೀಲಿಸುತ್ತಿದ್ದೇನೆಂದು ಹೇಳಿದರು.
ಜನವರಿ 7ರಂದು ಸಭೆ ನಡೆಸಿದ್ದ ವೇಳೆ ಮೂರು ಸ್ಲ್ಯಾಬ್‌ಗಳನ್ನು ಸರಿಪಡಿಸಲು ಒಂದು ತಿಂಗಳ ಗಡುವನ್ನು ನೀಡಲಾಗಿತ್ತು. ಗುತ್ತಿಗೆದಾರರು ಕೆಲಸವನ್ನು ಕಾರ್ಯಗತಗೊಳಿಸಿದ್ದಾರೆ. ಮುಂದಿನ ವರ್ಷದ ವೇಳೆಗೆ ಮೇಲ್ಸೇತುವೆ ಕಾರ್ಯ ಪೂರ್ಣಗೊಳ್ಳಳಿದೆ ಎಂದು ತಿಳಿಸಿದರು.
ಬಿಎಸ್‌ಸಿಪಿಎಲ್‌ನ ಹಿರಿಯ ಎಂಜಿನಿಯರ್ ಒಬ್ಬರು ಮಾತನಾಡಿ, ಯೋಜನೆಯು ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. 2026 ರಲ್ಲಿ ಪಾಲಿಕೆಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.
ಹಿಂದಿನ ಗುತ್ತಿಗೆದಾರರು ಶೇಕಡಾ 30 ರಷ್ಟು ಕೆಲಸ ಮಾಡಿ, ಕಾಮಗಾರಿಯನ್ನು ಕೈಬಿಟ್ಟಿದ್ದರು. ಇದರಿಂದ ಸವಾಲುಗಳು ಎದುರಾಗಿತ್ತು.ಅರ್ಧ ಮುಗಿದ ಕೆಲಸವನ್ನು ಕೈಗೆತ್ತಿಕೊಳ್ಳುವುದು ತುಂಬಾ ಸವಾಲಿನ ಕೆಲಸ. ಸ್ಥಳದಲ್ಲಿ ಭೂಸ್ವಾಧೀನದ ಸಮಸ್ಯೆ ಇತ್ತು. ಈಜಿಪುರ ಭಾಗದಲ್ಲಿ ಸೇಂಟ್ ಜಾನ್ಸ್ ಆಸ್ಪತ್ರೆ ಕಡೆಯಿಂದ ಕನಿಷ್ಠ 15 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, ಇದು ಸವಾಲಾಗಿ ಪರಿಣಮಿಸಿದೆ ಎಂದು ತಿಳಿಸಿದರು.
ಈ ವೇಳೆ ಸಚಿವ ರಾಮಲಿಂಗಾ ರೆಡ್ಡಿಯವರು ಮೂರು ತಿಂಗಳೊಳಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮತ್ತು ಜಮೀನು ಕಳೆದುಕೊಳ್ಳುವವರಿಗೆ ಕೂಡಲೇ ನಗದು ಪರಿಹಾರ ಪಾವತಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು,
ವಿಶೇಷ ಯೋಜನೆಗಳ ವಿಭಾಗದ ಬಿಬಿಎಂಪಿ ಎಂಜಿನಿಯರ್ ಅವರು ಮಾತನಾಡಿ,, ಪಿಲ್ಲರ್ 9 ರಿಂದ ಪಿಲ್ಲರ್ 60 ರವರೆಗಿನ ಕೆಲಸವು ಪರಿಣಾಮ ಬೀರುವುದಿಲ್ಲ. ಆದರೆ, ಅದರಿಂದ ಮುಂದೆ ಸಾಗುವ ಕಾಮಗಾರಿಗಳಿಗೆ ಸಮಸ್ಯೆಗಳು ಎದುರಾಗಲಿವೆ ಎಂದು ಹೇಳಿದ್ದಾರೆ.
Advertisement