News Headlines 14-02-25 | GIM: 10 ಲಕ್ಷ ಕೋಟಿ ರೂ ಹೂಡಿಕೆ, 6 ಲಕ್ಷ ಉದ್ಯೋಗ ಸೃಷ್ಟಿ; ಬುಲ್ಡೋಜರ್ ಕ್ರಮ ಇಲ್ಲ: ಪರಮೇಶ್ವರ; 9 ವಿಶ್ವವಿದ್ಯಾಲಯ ಮುಚ್ಚಲು ನಿರ್ಧಾರ; Covid ಹಗರಣದ ತನಿಖೆ CIDಗೆ!

News Headlines 14-02-25 | GIM: 10 ಲಕ್ಷ ಕೋಟಿ ರೂ ಹೂಡಿಕೆ, 6 ಲಕ್ಷ ಉದ್ಯೋಗ ಸೃಷ್ಟಿ; ಬುಲ್ಡೋಜರ್ ಕ್ರಮ ಇಲ್ಲ: ಪರಮೇಶ್ವರ; 9 ವಿಶ್ವವಿದ್ಯಾಲಯ ಮುಚ್ಚಲು ನಿರ್ಧಾರ; Covid ಹಗರಣದ ತನಿಖೆ CIDಗೆ!

1. GIM: 10 ಲಕ್ಷ ಕೋಟಿ ರೂ ಹೂಡಿಕೆ, 6 ಲಕ್ಷ ಉದ್ಯೋಗ ಸೃಷ್ಟಿ

ಬೆಂಗಳೂರಿನ ಅರಮನೆ ಆವರಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ಇನ್ವೆಸ್ಟ್ ಕರ್ನಾಟಕ -2025 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಇಂದು ತೆರೆ ಬಿದ್ದಿದೆ. ಸದ್ಯಕ್ಕೆ ರಾಜ್ಯಕ್ಕೆ 10,27,378 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮತ್ತು 6 ಲಕ್ಷ ಉದ್ಯೋಗ ಸೃಷ್ಟಿ ಖಾತ್ರಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಶುಕ್ರವಾರ ಹೇಳಿದ್ದಾರೆ. ಅರಮನೆ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಲಯವಾರು ಅಂಕಿಅಂಶಗಳ ಸಮೇತ ಮಾಹಿತಿ ನೀಡಿದರು. ಈಗ ಖಾತ್ರಿಯಾಗಿರುವ ಹೂಡಿಕೆಯಲ್ಲಿ ಶೇಕಡ 75ರಷ್ಟು ಬೆಂಗಳೂರಿನ ಆಚೆ ಇರುವ ಪ್ರದೇಶಗಳಿಗೆ ಹೋಗಲಿದ್ದು, ಶೇಕಡ 45ರಷ್ಟು ಬಂಡವಾಳವು ಉತ್ತರ ಕರ್ನಾಟಕದ ಪ್ರದೇಶಗಳಿಗೆ ಹರಿಯಲಿದೆ’ ಎಂದರು. ಹೊಸ ನೀತಿಯಡಿಯಲ್ಲಿ ತುಮಕೂರು ಮತ್ತು ವಿಜಯಪುರದಲ್ಲಿ ಕೈಗಾರಿಕಾ ಪಾರ್ಕ್, ಹುಬ್ಬಳ್ಳಿಯಲ್ಲಿ ಸ್ಟಾರ್ಟಪ್ ಪಾರ್ಕ್, ಉಳಿದ ಭಾಗಗಳಲ್ಲಿ ಡೀಪ್-ಟೆಕ್ ಪಾರ್ಕ್ ಮತ್ತು ಸ್ವಿಫ್ಟ್ ಸಿಟಿ ಮುಂತಾದವು ಅಸ್ತಿತ್ವಕ್ಕೆ ಬರಲಿವೆ. ಸೃಷ್ಟಿಯಾಗಲಿರುವ 6 ಲಕ್ಷ ಉದ್ಯೋಗಗಳು ತಯಾರಿಕೆ ಮತ್ತು ಇಂಧನ ಉತ್ಪಾದನೆ ಕ್ಷೇತ್ರಕ್ಕೆ ಸೇರಿವೆ ಎಂದು ಪಾಟೀಲ್ ತಿಳಿಸಿದರು.

2. ಉದಯಗಿರಿ ಠಾಣೆ ಮೇಲಿನ ಕಲ್ಲು ತೂರಾಟ, ಬುಲ್ಡೋಜರ್ ಕ್ರಮ ಇಲ್ಲ

ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಘಟನೆಯಲ್ಲಿ ಯಾರಿದ್ದಾರೆ ಅದೆಲ್ಲ ಹೇಳೋಕೆ ಆಗಲ್ಲ. ಆದರೆ ಅದರ ಹಿಂದೆ ಎಷ್ಟೇ ಪ್ರಭಾವಿ ಇದ್ದರೂ ಅವರ ವಿರುದ್ಧ ನಿರ್ದಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಮೈಸೂರಿನಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಈ ಘಟನೆ ಯಾವ ಕಾರಣಕ್ಕಾಗಿ ಆಯಿತು. ಯಾರಿಂದ ಆಯ್ತು ಅಂತ ತನಿಖೆ ಮಾಡಲು ಹೇಳಿದ್ದೆ. ಪ್ರಾಥಮಿಕ ಮಾಹಿತಿ ಪಡೆಯಲು ಇಲ್ಲಿಗೆ ಬಂದಿದ್ದೇನೆ. ಅಧಿಕಾರಿಗಳು ನನಗೆ ಎಲ್ಲಾ ವಿಚಾರವನ್ನು ತಿಳಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಉತ್ತರ ಪ್ರದೇಶದಂತ ಪರಿಸ್ಥಿತಿ ನಿರ್ಮಾಣವಾಗಿಲ್ಲ. ನಮ್ಮ ಜನರು ಆ ಮಟ್ಟಕ್ಕೆ ಹೋಗಿಲ್ಲ. ಹೀಗಾಗಿ ಗಲಭೆಕೋರರ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸುವುದಿಲ್ಲ ಎಂದರು.

3. ಉದಯಗಿರಿ ಹಿಂಸಾಚಾರ: 16 ಮಂದಿ ಬಂಧನ

ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಇಲ್ಲಿಯವರೆಗೂ 16 ಮಂದಿಯನ್ನು ಬಂಧಿಸಿದ್ದು ಈ ಸಂಬಂಧ 1,000 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಗುರುತು ಮತ್ತು ಸ್ಥಳಗಳನ್ನು ಪತ್ತೆಹಚ್ಚಲಾಗುತ್ತಿದ್ದು ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ತಮ್ಮ ಮನೆಗಳಲ್ಲಿಯೇ ಬಿಟ್ಟು ಹೋಗಿದ್ದಾರೆ. ಆದರೆ ಸದ್ಯ ಬಂಧನವಾಗಿರುವ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದರು. ಗಲಭೆಗೆ ಕಾರಣವಾದ ವಿವಾದಾತ್ಮಕ ಪೋಸ್ಟ್ ಮಾಡಿದ್ದ ಸತೀಶ್ ಅಲಿಯಾಸ್ ಪಾಂಡುರಂಗನನ್ನು ಇಂದು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

4. ಕೋವಿಡ್ ಹಗರಣದ ತನಿಖೆ ಸಿಐಡಿಗೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ತನಿಖೆ ಹೊಣೆಯನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇಂದು ಸಿಐಡಿಗೆ ವಹಿಸಿದೆ. ಪ್ರಕರಣ ಸಂಬಂಧ ಎಫ್ಐಆರ್ ದಾಖಲಾದ ಎರಡು ತಿಂಗಳ ಬಳಿಕ ಸಿಐಡಿ ತನಿಖೆಗೆ ಆದೇಶಿಸಲಾಗಿದೆ. ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ, ಮೂವರು ಡಿವೈಎಸ್ಪಿ ಗಳನ್ನು ಒಳಗೊಂಡ ತಂಡ ಹಗರಣದ ತನಿಖೆ ನಡೆಸಲಿದೆ. ಕೋವಿಡ್ ವೇಳೆ ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಕ ಎನ್‌-95 ಮಾಸ್ಕ್‌ ಹಾಗೂ ಪಿಪಿಇ ಕಿಟ್‌ ಸೇರಿದಂತೆ ಇತರ ಉಪಕರಣಗಳ ಖರೀದಿಯಲ್ಲಿ 167 ಕೋಟಿ ರೂ. ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಧಾನಸೌಧ ಠಾಣೆಗೆ ಡಿ.13ರಂದು ದೂರು ದಾಖಲಾಗಿತ್ತು. ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಪಿಜಿ ಗಿರೀಶ್, ಲೆಕ್ಕಪತ್ರ ಇಲಾಖೆ ಜಂಟಿ ನಿಯಂತ್ರಕ ಜೆಪಿ ರಘು, ಚುನಾಯಿತ ಪ್ರತಿನಿಧಿಗಳು ಸೇರಿ ಇತರರ ವಿರುದ್ಧ ಎಫ್ಐಆರ್ ನಮೂದಾಗಿದೆ.

5. BJP ಸರ್ಕಾರದಲ್ಲಿ ಆರಂಭವಾಗಿದ್ದ 9 ವಿಶ್ವವಿದ್ಯಾಲಯಕ್ಕೆ ಬೀಗ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಲಾಗಿದ್ದ 10 ಹೊಸ ವಿಶ್ವವಿದ್ಯಾಲಯಗಳ ಪೈಕಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸಚಿವ ಸಂಪುಟ ಉಪಸಮಿತಿ ತೀರ್ಮಾನಿಸಿದೆ. ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಗತಿಯ ಪರಿಶೀಲನೆ ಕುರಿತು ಗುರುವಾರ ನಡೆಸಿದ ಮೊದಲ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯ ಈ ಉಪಸಮಿತಿಯು, ಬೀದರ್ ವಿಶ್ವವಿದ್ಯಾಲಯ ಹೊರತುಪಡಿಸಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ಮತ್ತು ನೃಪತುಂಗ ವಿಶ್ವವಿದ್ಯಾಲಯ ಸೇರಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com