
ಬೆಂಗಳೂರು: ಕರ್ನಾಟಕದಲ್ಲಿ ಹೆಚ್ಚುತ್ತಿರುವ ಭೂಮಿಯ ಬೆಲೆಯು ಕೈಗಾರಿಕಾ ಹೂಡಿಕೆಗೆ ಸವಾಲಾಗಿ ಪರಿಣಮಿಸಿದ್ದು, ಉದ್ಯಮಗಳು ತಮ್ಮ ಕಾರ್ಯಾಚರಣೆಗೆ ಭೂಮಿ ಪಡೆಯುವುದು ಕಷ್ಟಕರವಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಭೂ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯವನ್ನು ಒತ್ತಾಯಿಸಿದ ಅವರು, ಕೇಂದ್ರ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು.
ಇನ್ವೆಸ್ಟ್ ಕರ್ನಾಟಕ 2025ರ ಭಾಗವಾಗಿ 'ಎಸ್‌ಎಂಇ ಕನೆಕ್ಟ್ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಜನೆಗಳಿಗೆ ಅಗತ್ಯವಿರುವ ವಾಸ್ತವಿಕ ಹೂಡಿಕೆಗಿಂತಲೂ ಭೂಸ್ವಾಧೀನ ವೆಚ್ಚವೇ ಅಧಿಕವಾಗಿದೆ ಎಂದು ಉದ್ಯಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಈ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.
ಕ್ಲಸ್ಟರ್ ಮಾದರಿಯ ಮೂಲಕ ಕೈಗಾರಿಕಾ ಬೆಳವಣಿಗೆಗೆ ಕೇಂದ್ರ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡಲಾಗುತ್ತದೆ. ರಾಜ್ಯ ಸರ್ಕಾರವು ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ. ಸೌದಿ ಅರೇಬಿಯಾ, ದೋಹಾ ಮತ್ತು ದುಬೈ ಸೇರಿದಂತೆ ಯುಎಇಯಿಂದ ಕರ್ನಾಟಕವು 820 ಕೋಟಿ ರೂ. ಹೂಡಿಕೆ ಪಡೆದುಕೊಂಡಿದೆ ಎಂದು ತಿಳಿಸಿದರು.
ಹೆಚ್ಚುವರಿಯಾಗಿ, ಕೆಎಲ್‌ಇ ಸೊಸೈಟಿಯ ಶಿವಶಕ್ತಿ ಶುಗರ್ಸ್ ಫ್ಯಾಕ್ಟರಿ 1,000 ಕೋಟಿ ರೂಪಾಯಿ ಹೂಡಿಕೆಯನ್ನು ಪಡೆಯುತ್ತಿದೆ ಮತ್ತು ಇನಾಂದಾರ್ ಶುಗರ್ಸ್‌ನಲ್ಲಿ 250 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.
'ಎಂಎಸ್‌ಎಂಇಗಳು ದೇಶದ ಜಿಡಿಪಿಗೆ ಶೇ 30 ರಷ್ಟ ಕೊಡುಗೆ ನೀಡುತ್ತಿವೆ ಮತ್ತು 25 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿವೆ. ಕಳೆದ ದಶಕದಲ್ಲಿ ಭಾರತದಾದ್ಯಂತ ಏಳು ಲಕ್ಷ ಎಂಎಸ್‌ಎಂಇಗಳಿಗೆ 27.5 ಲಕ್ಷ ಕೋಟಿ ರೂ. ಸಾಲವನ್ನು ಒದಗಿಸಲಾಗಿದೆ. ಹೊಸ ವರ್ಗೀಕರಣಗಳನ್ನು ಪರಿಚಯಿಸುವುದರೊಂದಿಗೆ MSME ನೀತಿಯನ್ನು ಪರಿಷ್ಕರಿಸಲಾಗಿದೆ. ಕಿರು ಉದ್ಯಮಗಳ ವಹಿವಾಟು ಮಿತಿಯನ್ನು 10 ಕೋಟಿ ರೂ.ಗೆ, ಸಣ್ಣ ಉದ್ಯಮಗಳಿಗೆ 100 ಕೋಟಿ ರೂ. ಮತ್ತು ಮಧ್ಯಮ ಉದ್ಯಮಗಳ ವಹಿವಾಟು ಮಿತಿಯನ್ನು 500 ಕೋಟಿ ರೂಪಾಯಿಗೆ ಏರಿಸಲಾಗಿದೆ' ಎಂದರು .
ಕರ್ನಾಟಕದಲ್ಲಿ ಕೃಷಿ ಮತ್ತು ಕೈಗಾರಿಕಾ ಅಭಿವೃದ್ಧಿ ಎರಡನ್ನೂ ಪರಿಗಣಿಸುವ ಅಗತ್ಯವಿದೆ. ಆಹಾರ ಸಂಸ್ಕರಣೆಯಲ್ಲಿ ವಿಶೇಷವಾಗಿ ರೆಡಿ ಟು ಈಟ್ ಮತ್ತು ರೆಡಿ ಟು ಕುಕ್ ಆಹಾರ ಉತ್ಪನ್ನಗಳಿಗೆ ರಾಜ್ಯವು ಅಪಾರ ಸಾಮರ್ಥ್ಯವನ್ನು ಹೊಂದಿದೆ. ವಿದೇಶಿ ಮಾರುಕಟ್ಟೆಗಳು ಕರ್ನಾಟಕದಿಂದ ಡಿಜಿಟಲ್ ತಂತ್ರಜ್ಞಾನಗಳು ಮತ್ತು ನುರಿತ ಕೆಲಸಗಾರರನ್ನು ಹೆಚ್ಚಾಗಿ ಹುಡುಕುತ್ತಿವೆ. ಈ ಜಾಗತಿಕ ಬೇಡಿಕೆಗಳನ್ನು ಪೂರೈಸಲು ಅಗತ್ಯವಾದ ಕೌಶಲ್ಯಗಳೊಂದಿಗೆ ಯುವಜನರನ್ನು ಸಜ್ಜುಗೊಳಿಸುವತ್ತ ಸರ್ಕಾರ ಗಮನಹರಿಸಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ 30ಕ್ಕೂ ಹೆಚ್ಚು ಯಶಸ್ವಿ MSME ಗಳಿಗೆ "SME ಕನೆಕ್ಟ್ ಅವಾರ್ಡ್‌ಗಳನ್ನು" ಪ್ರದಾನ ಮಾಡಿದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರಿನ ಕೈಗಾರಿಕೆಗಳನ್ನು ಬೆಂಬಲಿಸಲು ಹೆಚ್ಚಿನ ನೀರಿನ ಅಗತ್ಯವಿದೆ. ಬೇಡಿಕೆಗೆ ಅನುಗುಣವಾಗಿ ಕಾವೇರಿ ನದಿಯಿಂದ ಹೆಚ್ಚುವರಿಯಾಗಿ 6 ಟಿಎಂಸಿ ನೀರು ಹರಿಸಲಾಗುವುದು. ನಗರದ ಸಂಚಾರ ದಟ್ಟಣೆ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯವು ಶ್ರಮಿಸುತ್ತಿದೆ ಎಂದು ಒತ್ತಿ ಹೇಳಿದರು.
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಚಿವರಾದ ಎಂಬಿ ಪಾಟೀಲ್, ರಾಮಲಿಂಗಾರೆಡ್ಡಿ, ಎನ್ ಚಲುವರಾಯ ಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Advertisement