
ಮಂಡ್ಯ: ಅಸಲಿ ಬಂದೂಕು ಹಿಡಿದು ಆಟವಾಡುವಾಗ ಆಕಸ್ಮಿಕವಾಗಿ ಗುಂಡು ತಗಲಿ ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಭಾನುವಾರ ನಡೆದಿದೆ.
ಮೃತ ಮಗುವನ್ನು ಅಭಿಷೇಕ್ (3) ಎಂದು ಗುರ್ತಿಸಲಾಗಿದೆ. ನಾಗಮಂಗಲದ ದೊಂದೇಮಾದಿಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಎಂಬುವರಿಗೆ ಸೇರಿದ ಕೋಳಿ ಫಾರಂನಲ್ಲಿ ಈ ಘಟನೆ ನಡೆದಿದೆ.
ಮಗುವಿನ ಪೋಷಕರು ಶಶಾಂಕ್ ಮತ್ತು ಲಿಪಿಕಾ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಕೋಳಿ ಫಾರಂನಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕೋಳಿಫಾರಂನಲ್ಲಿ ಭದ್ರತೆಗಾಗಿ ಗುಂಡು ತುಂಬಿದ ಒಂದು ಅಸಲಿ ಗನ್ ಇಡಲಾಗಿತ್ತು.
ಈ ನಡುವೆ ಕೋಳಿ ಫಾರಂಗೆ ಪುತ್ರ ಸುದೀಪ್ (13) ನೊಂದಿಗೆ ಭವಶಂಕರ್ ದಾಸ್ ಎಂಬಾತ ಬಂದಿದ್ದು, ಮಗುವಿನ ಪೋಷಕರೊಂದಿಗೆ ಮಾತುಕತೆ ನಡೆಸುತ್ತಿದ್ದ. ಈ ವೇಳೆ ಮಗುವಿನೊಂದಿಗೆ ಬಾಲಕ ಸುದೀಪ್ ಆಟವಾಡುತ್ತಿದ್ದ. ಮೇಲೆ ಇದ್ದ ಗನ್ ತೆಗೆದುಕೊಂಡು ಕಳ್ಳ-ಪೊಲೀಸ್ ಆಟವಾಡೋಣ ಎಂದು ಹೇಳಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಮಿಸ್ ಫೈರಿಂಗ್ ಆಗಿದೆ. ಪರಿಣಾಮ ಪುಟ್ಟ ಮಗುವಿನ ಹೊಟ್ಟೆ ನುಸುಳಿದೆ.
ಘಟನೆಯಲ್ಲಿ ಅಭಿಷೇಕ್ ಮಾತ್ರವಲ್ಲದೇ ಆತನ ತಾಯಿ ಕೈಗೂ ಗುಂಡು ತಗುಲಿ ಗಾಯಗೊಂಡಿದ್ದಾರೆ. ತಕ್ಷಣವೇ ಇಬ್ಬರನ್ನೂ ನಾಗಮಂಗಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗು ಅದಾಗಲೇ ಮೃತಪಟ್ಟಿದೆ.
ದುರಂತಕ್ಕೆ ಕೋಳಿ ಫಾರಂ ಮಾಲೀಕ ನರಸಿಂಹಮೂರ್ತಿ ನಿರ್ಲಕ್ಷವೇ ಕಾರಣ ಎಂದು ಹೇಳಲಾಗುತ್ತಿದೆ, ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಾಗಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಬಂದೂಕು ವಶಕ್ಕೆ ಪಡೆದಿದ್ದಾರೆ. ತನಿಖೆ ಆರಂಭಿಸಿದ್ದಾರೆ.
Advertisement