
ಉಡುಪಿ: ಭಕ್ತಿ ವೈಯಕ್ತಿಕ ವಿಷಯ ಮತ್ತು ಭಕ್ತಿಯಿದ್ದವರು ಮಹಾಕುಂಭಕ್ಕೆ ಹೋಗುತ್ತಾರೆ. ಜನದಟ್ಟಣೆ ಕಡಿಮೆಯಾದ ನಂತರ ನಾನು ಕೂಡ ಕುಂಭಮೇಳಕ್ಕೆ ಹೋಗುತ್ತೇನೆಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸೋಮವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂಭಮೇಳದ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ಹಾಗೂ ಡಿಕೆಶಿ ಪುಣ್ಯಸ್ನಾನ ಮಾಡಿರೋದು ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರ ವರ್ಷನ್ ಅವರು ಹೇಳಿದ್ದಾರೆ, ಇವರ ವರ್ಷನ್ ಇವರು ಹೇಳಿದ್ದಾರೆ. ಖರ್ಗೆಯವರು ಹೇಳಿದ ತಕ್ಷಣ ಹೋಗುವವರನ್ನು ನಿಲ್ಲಿಸಲು ಸಾಧ್ಯವಿಲ್ಲ. ಕುಂಭಮೇಳಕ್ಕೆ ಹೋಗುವವರು ಮುಕ್ತವಾಗಿದ್ದಾರೆ ಎಲ್ಲರೂ ಹೋಗುತ್ತಿದ್ದಾರೆ. ಇದರಲ್ಲಿ ಏನೂ ಗೊಂದಲ ಆಗುವುದಿಲ್ಲ ಎಂದು ಹೇಳಿದರು,
ಮಹಾಕುಂಭಮೇಳಕ್ಕೆ ಹೋಗುವುದು ಅವರವರ ಭಕ್ತಿ, ಭಕ್ತಿ ಇದ್ದವರು ಹೋಗಿಯೇ ಹೋಗುತ್ತಾರೆ. ಮಂಗಳೂರಿಂದಲೂ ರೈಲು ಹೊರಟಿದೆ. ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಕುಂಭಮೇಳಕ್ಕೆ ಹೊರಟಿದ್ದಾರೆ. ಜನದಟ್ಟಣೆ ಕಡಿಮೆಯಾಗಲಿ, ಆಮೇಲೆ ನಾನು ಹೋಗಿ ಬರುತ್ತೇನೆ. ಈಗ ಬಹಳ ಜನದಟ್ಟಣೆ ಇದೆ. ಮಂಗಳೂರಿನಿಂದ ಕುಂಭಮೇಳಕ್ಕೆ ಹೊರಟವರಲ್ಲಿ ಶೇ.50 ಕಾಂಗ್ರೆಸ್‌ನವರೇ ಇದ್ದಾರೆ. ಅದೇನು ಒಂದೇ ಪಕ್ಷಕ್ಕೆ ಸೀಮಿತವಾದ ಆಚರಣೆ ಅಲ್ಲ. ಯಾರ ಭಕ್ತಿಗೂ ನಾವು ಅಡ್ಡಿಪಡಿಸಲು ಹೋಗಲ್ಲ, ಇದು ಜನರ ಭಕ್ತಿ-ಪ್ರೀತಿ ವಿಶ್ವಾಸಕ್ಕೆ ಸಂಬಂಧಪಟ್ಟ ವಿಷಯ ಎಂದು ತಿಳಿಸಿದರು.
ಸಚಿವ ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ರಾಜಣ್ಣಗೆ ಏನಾದರೂ ಸಮಸ್ಯೆಯಿದ್ದರೆ ಪಕ್ಷದ ಚೌಕಟ್ಟಿನೊಳಗೆ ಮಾತಾಡಬೇಕು ಮತ್ತು ಪರಿಹರಿಸಿಕೊಳ್ಳಬೇಕು, ಅವರ ಹೇಳಿಕೆಗೆ ನಾನು ಉಡುಪಿ, ಮಂಗಳೂರಲ್ಲಿ ಕೂತು ಮಾತಾಡಿದರೆ ಪರಿಹಾರ ಸಿಗಲಾರದು. ಪಕ್ಷದಲ್ಲಿ ನಾಯಕರ ನಡುವೆ ಯಾವ ಸಮಸ್ಯೆಯೂ ಇಲ್ಲ, ಇದ್ದರೆ ಮಾಧ್ಯಮದವರ ಗಮನಕ್ಕೆ ತರಲಾಗುವುದು ಎಂದರು.
ಪಕ್ಷದೊಳಗಿನ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಎಂಬ ನಿಲುವು ಸ್ಪಷ್ಟಪಡಿಸಿದರು.
ಕರಾವಳಿ ಭಾಗದ ಕಾರ್ಯಕರ್ತರೊಂದಿಗೆ ನಾವು ನೇರ ಸಂಪರ್ಕದಲ್ಲಿದ್ದು, ಸಿಎಂ ಆಗುವ ವಿಚಾರ ಸದ್ಯ ಚರ್ಚೆಯಲ್ಲಿಲ್ಲ. ಯಾರು ಸಿಎಂ ಆಗಬೇಕು ಎಂಬುದನ್ನು ನಿರ್ಧರಿಸುವವರು ನಾವಲ್ಲ. ಈ ಪ್ರಕ್ರಿಯೆಯಲ್ಲಿ ನಾವು ಕೂಡ ನಿಮ್ಮಂತೆಯೇ ಪ್ರೇಕ್ಷಕರಾಗಿದ್ದೇವೆ ಎಂದು ಹೇಳಿದರು.
Advertisement