
ಬೆಂಗಳೂರು: ಮಾಜಿ ಪ್ರಧಾನಿ ಮತ್ತು ರಾಜ್ಯಸಭಾ ಸದಸ್ಯ ಹೆಚ್‌ಡಿ ದೇವೇಗೌಡ ಅವರು ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ಅವರೊಂದಿಗೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಬಗ್ಗೆ ಶುಕ್ರವಾರ ಚರ್ಚೆ ನಡೆಸಿದರು.
ನವದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ ಕೇಂದ್ರ ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಮಾಜಿ ಪ್ರಧಾನಿಗಳು, ಸಚಿವರ ಜತೆ ಮುಖ್ಯವಾಗಿ ರಾಜ್ಯಕ್ಕೆ ಸಂಬಂಧಪಟ್ಟ ಅಂತಾರಾಜ್ಯ ನೀರಾವರಿ ವಿವಾದಗಳು, ರಾಜ್ಯ ಎದುರಿಸುತ್ತಿರುವ ಜಲ ಸಂಕಷ್ಟ, ರಾಜ್ಯದ ನೀರಾವರಿ ಯೋಜನೆಗಳಿಗೆ ತ್ವರಿತ ಅನುಮೋದನೆ ಮತ್ತು ಅಗತ್ಯ ಅನುದಾನ ನೀಡುವ ವಿಷಯಗಳ ಬಗ್ಗೆ ಸುದೀರ್ಘ ಮಾತುಕತೆ ನಡೆಸಿದರು.
ಮಾಜಿ ಪ್ರಧಾನಿಗಳ ಬೇಡಿಕೆಗಳ ಬಗ್ಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಜಲಶಕ್ತಿ ಸಚಿವರು, ಈ ಬಗ್ಗೆ ತಾವೇ ಖುದ್ದು ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಅಲ್ಲದೆ, ರಾಜ್ಯದ ಜಲ ವಿವಾದಗಳ ಬಗ್ಗೆ ಕೇಂದ್ರ ಸಚಿವರು, ಮಾಜಿ ಪ್ರಧಾನಿಗಳಿಂದ ಸಾಕಷ್ಟು ಮಾಹಿತಿ ಪಡೆದುಕೊಂಡರು. ಅಲ್ಲದೆ, ಗೋದಾವರಿ-ಕೃಷ್ಣಾ-ಕಾವೇರಿ ನದಿಗಳ ಜೋಡಣೆಯ ಯೋಜನೆಯಲ್ಲಿ ರಾಜ್ಯಕ್ಕೆ 25 ಟಿಎಂಸಿ ಅಡಿಯಷ್ಟು ನೀರು ಹಂಚಿಕೆ ಮಾಡಬೇಕು ಎಂದು ದೇವೇಗೌಡ ಅವರು ಮನವಿ ಮಾಡಿದರು. ಇದಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ದೇವೇಗೌಡ ಅವರು, ಗೋದಾವರಿ-ಕೃಷ್ಣಾ-ಕಾವೇರಿ ನೀರಾವರಿ ಯೋಜನೆಯಡಿ ಕರ್ನಾಟಕಕ್ಕೆ 25 ಟಿಎಂಸಿ ನೀರು ಸಿಗಬೇಕು. ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಈ ಕಾರಣಕ್ಕಾಗಿ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ್ದರು.
ಈ ಹೋರಾಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಸಂಸದರೊಂದಿಗೆ ಸೇರಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಕರ್ನಾಟಕದ ಹಿತಾಸಕ್ತಿಗಳ ವಿಷಯಕ್ಕೆ ಬಂದಾಗ, ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡಬೇಕು. ಅಂತಹ ಒಗ್ಗಟ್ಟಿನ ಪ್ರಯತ್ನದಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದರು.
ಈ ವಿಷಯದ ಬಗ್ಗೆ 2022 ಮತ್ತು 2024 ರಲ್ಲಿ ಜಲಶಕ್ತಿ ಸಚಿವರಿಗೆ ಪತ್ರ ಬರೆದಿರುವುದಾಗಿಯೂ ಹೇಳಿದ್ದರು, ಪ್ರಸ್ತುತ, ಕರ್ನಾಟಕಕ್ಕೆ 15.891 ಟಿಎಂಸಿ ಹಂಚಿಕೆ ಮಾಡಲಾಗಿದೆ, ಆದರೆ ಅದನ್ನು 25 ಟಿಎಂಸಿಗೆ ಹೆಚ್ಚಿಸಬೇಕೆಂದು ನಾನು ಒತ್ತಾಯಿಸುತ್ತಿದ್ದೇನೆಂದು ಹೇಳಿದ್ದರು.
ಗೋದಾವರಿ ನದಿಯಿಂದ 15.91 ಟಿಎಂಸಿ ನೀರನ್ನು ಘಟಪ್ರಭಾ ನದಿಗೆ ಹೇಗೆ ತಿರುಗಿಸಲಾಗುತ್ತದೆ ಎಂದು ನಾನು ಸಂಸತ್ತಿನಲ್ಲಿ ಕೇಳಿದ್ದೇನೆ. ಇದು ಹೇಗೆ ಸಾಧ್ಯ? ಗೋದಾವರಿ ನೀರನ್ನು ಕಾವೇರಿ ನದಿಗೆ ನಿಖರವಾಗಿ ಎಲ್ಲಿಗೆ ಜೋಡಿಸಲಾಗುತ್ತದೆ? ಯೋಜನೆಯ ವಿವರಗಳು ಸ್ಪಷ್ಟವಾಗಿಲ್ಲ, ಕರ್ನಾಟಕವು ನಿಖರವಾದ ಮಾಹಿತಿಯನ್ನು ಪಡೆಯಬೇಕು. ಈ ಬಗ್ಗೆ ನಾನು ಪ್ರಧಾನಿಗೆ ಬರೆಯುತ್ತೇನೆಂದು ತಿಳಿಸಿದ್ದರು.
Advertisement