
ಮಂಗಳೂರು: ಮಂಗಳೂರಿನ ಬಂಟ್ವಾಳದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಅಂಗಡಿ ಮುಂದೆ ಕುಳಿತಿದ್ದ ಮಹಿಳೆಗೆ ವೇಗವಾಗಿ ಬಂದ ಕಾರು ಢಿಕ್ಕಿಯಾದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮಂಗಳೂರಿನ ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮದ ಪಾಲೆದಮರ ಎಂಬಲ್ಲಿ ಈ ಘಟನೆ ನಡೆದಿದ್ದು, 'ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಅಂಗಡಿಗೆ ನುಗ್ಗಿದ್ದು ಅಂಗಡಿ ಹೊರಗಡೆ ಕುಳಿತುಕೊಂಡಿದ್ದ ವೃದ್ಧೆಯೊಬ್ಬರಿಗೆ ಢಿಕ್ಕಿಯಾಗಿದೆ. ಕಾರು ಢಿಕ್ಕಿಯ ರಭಸಕ್ಕೆ ಮಹಿಳೆ ಸಾವನ್ನಪ್ಪಿದ್ದಾರೆ.
ಅಪಘಾತದ ಭೀಕರ ದೃಶ್ಯ ಅಂಗಡಿ ಮುಂದೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಕಾರಿನ ಧಾವಂತಕ್ಕೆ ಸಾಕ್ಷಿಯಾಗಿದೆ. ಮೃತ ಮಹಿಳೆಯನ್ನು ವಾಮದಪದವು ನಿವಾಸಿ ಸುಮತಿ (91 ವರ್ಷ) ಎಂದು ಗುರುತಿಸಲಾಗಿದೆ. ಅಪಘಾತಕ್ಕೀಡಾದ ಕಾರನ್ನು ಶೋಭಾ ಎಂಬವರು ಚಲಾಯಿಸುತ್ತಿದ್ದರು ಎನ್ನಲಾಗಿದೆ.
ವೇಗವಾಗಿ ಬಂದ ಕಾರು ಚಾಲಕಿ ಶೋಭಾ ಅವರ ನಿಯಂತ್ರಣ ತಪ್ಪಿ ಅಂಗಡಿಯತ್ತ ನುಗ್ಗಿ ಬಂದಿದೆ. ಮೊದಲಿಗೆ ಅಂಗಡಿಗೆ ಬಂದಿದ್ದ ಗ್ರಾಹಕ ಲೂಯಿಸ್ ಡಿಕೋಸ್ತಾ ಅವರಿಗೆ ಕಾರು ಡಿಕ್ಕಿ ಹೊಡೆದಿದ್ದು ಅವರು ದೂರಕ್ಕೆ ಬಿದ್ದಿದ್ದಾರೆ. ಬಳಿಕ ಅಂಗಡಿ ಮುಂದೆ ಕುಳಿತಿದ್ದ ವೃದ್ಧೆ ಸುಮತಿಗೆ ಕಾರು ನೇರವಾಗಿ ಡಿಕ್ಕಿಯಾಗಿದೆ.
ಗಂಭೀರ ಗಾಯಗೊಂಡಿದ್ದ ಸುಮತಿ ಅವರನ್ನು ಮಂಗಳೂರು ಹೊರವಲಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement