
ಬೆಂಗಳೂರು: 2023ನೇ ವರ್ಷಕ್ಕೆ ಹೋಲಿಸಿದರೆ 2024ರಲ್ಲಿ ಮಾರಣಾಂತಿಕ ಅಪಘಾತಗಳ ಪ್ರಮಾಣ ಶೇ 1.26 ರಷ್ಟು ಕಡಿಮೆಯಾಗಿದೆ ಮತ್ತು ಅಪಘಾತಗಳಿಂದ ಉಂಟಾದ ಸಾವುಗಳ ಪ್ರಮಾಣ ಶೇ 1.90 ರಷ್ಟು ಇಳಿಕೆಯಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಬುಧವಾರ ಹೇಳಿದ್ದಾರೆ.
2023ಕ್ಕೆ ಹೋಲಿಸಿದರೆ 2024ರಲ್ಲಿ ಮಾರಣಾಂತಿಕವಲ್ಲದ ಅಪಘಾತಗಳ ಸಂಖ್ಯೆ ಶೇ 4.57 ರಷ್ಟು ಕಡಿಮೆಯಾಗಿವೆ. ಮಾರಣಾಂತಿಕವಲ್ಲದ ಅಪಘಾತಗಳಲ್ಲಿನ ಈ ಕುಸಿತವು ಒಟ್ಟು ಅಪಘಾತಗಳ ಪ್ರಮಾಣದಲ್ಲಿ ಶೇ 3.97 ರಷ್ಟು ಇಳಿಕೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.
2024ರಲ್ಲಿ ಬೆಂಗಳೂರಿನಲ್ಲಿ 4,784 ಅಪಘಾತ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 871 ಮಾರಣಾಂತಿಕ ಮತ್ತು 3,913 ಮಾರಣಾಂತಿಕವಲ್ಲದ ಪ್ರಕರಣಗಳಾಗಿವೆ. ಈ ಅಪಘಾತಗಳಲ್ಲಿ 893 ಮಂದಿ ಸಾವಿಗೀಡಾಗಿದ್ದು, 4,052 ಮಂದಿ ಗಾಯಗೊಂಡಿದ್ದಾರೆ.
ಸ್ವಯಂ ಅಪಘಾತಕ್ಕೀಡಾಗುವ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದ್ದು, ಅಂತಹ 210 ಪ್ರಕರಣಗಳಲ್ಲಿ 212 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರು ನಗರದಲ್ಲಿ ವಿಶೇಷವಾಗಿ ಪಾದಚಾರಿಗಳಿಗೆ ಆಗುವ ಅಪಘಾತಗಳನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಆ ಪ್ರಯತ್ನಗಳು ಫಲ ನೀಡಿವೆ. 2024ರಲ್ಲಿ ಪಾದಚಾರಿಗಳ ಸಾವಿನಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಅಪಘಾತಗಳಲ್ಲಿ 233 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2023ಕ್ಕೆ ಹೋಲಿಸಿದರೆ ಶೇ 23.17 ರಷ್ಟು ಕಡಿಮೆಯಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
2024ರಲ್ಲಿ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳಿಗಾಗಿ ಒಟ್ಟು 82,86,561 ಪ್ರಕರಣಗಳು ದಾಖಲಾಗಿವೆ ಮತ್ತು ಒಟ್ಟು 80.90 ಕೋಟಿ ರೂ. ದಂಡದ ಮೊತ್ತ ಸಂಗ್ರಹ ಆಗಿದೆ.
ಕುಡಿದು ವಾಹನ ಚಲಾಯಿಸುವ ಪ್ರಕರಣಗಳು 2024ರಲ್ಲಿ ಜಾಸ್ತಿಯಾಗಿದ್ದು, 2023ರಲ್ಲಿ 7,053 ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ 23,574 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಟ್ರಾಫಿಕ್ ಪೊಲೀಸರು ವೈದ್ಯಕೀಯ ತುರ್ತುಸ್ಥಿತಿಗಾಗಿ 54 ಗ್ರೀನ್ ಕಾರಿಡಾರ್‌ಗಳನ್ನು ರಚಿಸಿದ್ದಾರೆ.
2024ರಲ್ಲಿ 532 ವ್ಹೀಲಿಂಗ್ ಪ್ರಕರಣಗಳನ್ನು ದಾಖಲಿಸಲಾಗಿದ್ದು, ನಂತರ 520 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಈ ಸಂಬಂಧ 456 ಜನರನ್ನು ಬಂಧಿಸಲಾಗಿದೆ. ವ್ಹೀಲಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ, 121 ಅಪ್ರಾಪ್ತರು ಮತ್ತು 79 ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 146 ಚಾಲನಾ ಪರವಾನಗಿಗಳನ್ನು ಅಮಾನತಿಗೆ ಕಳುಹಿಸಲಾಗಿದೆ ಮತ್ತು 246 ಆರ್‌ಸಿ (ನೋಂದಣಿ ಪ್ರಮಾಣಪತ್ರ) ರದ್ದಿಗಾಗಿ ಕಳುಹಿಸಲಾಗಿದೆ.
Advertisement