
ಬೆಂಗಳೂರು: ಸಿಗರೇಟ್ ಲೈಟರ್ ಕೇಳಿದ್ದಕ್ಕೆ ಇಬ್ಬರು ಯುವಕರ ಮೇಲೆ ದುಷ್ಕರ್ಮಿಗಳು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆಯೊಂದು ಬನಶಂಕರಿ 6ನೇ ಹಂತದ ಗಾಣಿಗರಪಾಳ್ಯದ 100 ಅಡಿ ರಸ್ತೆಯಲ್ಲಿ ಬುಧವಾರ ತಡರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆರ್ ಆರ್ ನಗರದ ಬಿಇಎಂಎಲ್ ಲೇಔಟ್ ನಿವಾಸಿ ಎ.ಜೆ.ಹರ್ಷಿತ್ ಮತ್ತು ಆತನ ಸ್ನೇಹಿತ ಪಟ್ಟಣಗೆರೆ ನಿವಾಸಿ ವಿನು ಲೋಚನ್ ಹಲ್ಲೆಗೊಳಗಾದ ಯುವಕರಾಗಿದ್ದಾರೆ.
ಆರೋಪಿಗಳನ್ನು ಅಭಿಷೇಕ್, ಪುನೀತ್ ಮತ್ತು ಜಯಪ್ರಕಾಶ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಆರೋಪಿ ಅರುಣ್ ಘಟನೆ ವೇಳೆ ಸ್ಥಳಕ್ಕೆ ಬಂದ ಪೊಲೀಸರನ್ನು ನೋಡಿ ಪರಾರಿಯಾಗಿದ್ದಾನೆ.
ಹೊಸ ವರ್ಷಾಚರಣೆಗಾಗಿ ಹರ್ಷಿತ್ ಹಾಗೂ ವಿನು ಇಬ್ಬರು ಬನಶಂಕರಿಯಲ್ಲಿರುವ ಪಬ್ ವೊಂದಕ್ಕೆ ಹೋಗಿದ್ದರು. ಪಬ್ ನಿಂದ ಹೊರ ಬಂದ ಹರ್ಷಿತ್ ಧೂಮಪಾನ ಮಾಡಲು ಬಯಸಿದ್ದ. ಆದರೆ, ಆತನ ಬಳಿ ಲೈಟರ್ ಇರಲಿಲ್ಲ. ಈ ವೇಳೆ ಪಬ್ ಹೊರಗೆ ಕಾರಿನ ಹೊರಗೆ ವ್ಯಕ್ತಿಯೊಬ್ಬ ಧೂಮಪಾನ ಮಾಡುತ್ತಿದ್ದುದ್ದನ್ನು ನೋಡಿ, ಲೈಟರ್ ಕೇಳಿದ್ದಾನೆ. ಈ ವೇಳೆ ವ್ಯಕ್ತಿ ಹರ್ಷಿತ್ ನನ್ನು ನಿಂದಿಸಲು ಆರಂಭಿಸಿದ್ದು, ಇದನ್ನು ಪ್ರಶ್ನಿಸಿದಾಗ ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ಕಾರಿನಲ್ಲಿದ್ದ ಆರೋಪಿಯ ಇತರೆ ಸ್ನೇಹಿತರು ಕೂಡ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದನ್ನು ಕಂಡ ಹರ್ಷಿತ್ ಸ್ನೇಹಿತ ವಿನು ನೆರವಿಗೆ ಧಾವಿಸಿದ್ದು, ನಾಲ್ವರು ಆರೋಪಿಗಳು ಇಬ್ಬರ ಮೇಲೆ ಮನಬಂದಂತೆ ಥಳಿಸಿದ್ದಾರೆ.
ಘಟನೆಯಲ್ಲಿ ಇಬ್ಬರಿಗೂ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಘಟನೆ ಸಂಬಂಧ ಹರ್ಷಿತ್ ಪೊಲೀಸರಿಗೆ ದೂರು ನೀಡಿದ್ದಾರೆ. ಎಲ್ಲರೂ ಕುಡಿದ ಮತ್ತಿನಲ್ಲಿದ್ದರು. ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಹೊಸ ವರ್ಷದ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾದ ಪೊಲೀಸರು ಆರೋಪಿಗಳನ್ನು ತಕ್ಷಣವೇ ಬಂಧಿಸಿದರು ಮತ್ತು ಈಗ ಎಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement