
ಕಲಬುರಗಿ/ಬೀದರ್: ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಪೊಲೀಸರ ಅನ್ಯಾಯ ವಿರುದ್ಧ ನೊಂದ ಸಚಿನ್ ಕುಟುಂಬವು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆಯಲು ಮುಂದಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿನ್ ಪಾಂಚಾಳ್ ಅವರ ಸಹೋದರಿ ಸುರೇಖಾ ಅವರು, ಈ ಪ್ರಕರಣವನ್ನು ಸಿಐಡಿ, ಸಿಬಿಐ ಸೇರಿದಂತೆ ಯಾವುದಾದರೂ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲಿ. ನಮ್ಮ ತಮ್ಮನ ಸಾವಿಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಈಗಾಗಲೇ ತನಿಖೆಯನ್ನು ವಿಳಂಭ ಮಾಡುತ್ತಿರುವುದು ಬೇಸರ ತಂದಿದೆ. ಘಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ನನ್ನ ಸಹೋದರ ಸಾವಿನಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ. ನನ್ನ ಸಹೋದರ ಮರಣ ಪತ್ರದಲ್ಲಿ ಯಾರ್‍ಯಾರ ಹೆಸರುಗಳನ್ನು ಬರೆದಿದ್ದಾನೋ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನಿರ್ಲಕ್ಷ್ಯ ತೋರಿದ ಪೊಲೀಸ್ ಮೇಲಧಿಕಾರಿಗಳ ಮೇಲೆಯೂ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಬೇಡಿಕೆ ಎಂದರು.
ನನ್ನ ಕುಟುಂಬ ದುಃಖದಲ್ಲಿದೆ, ಆದರೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ, ಈ ವ್ಯವಸ್ಥೆಯಲ್ಲಿ ಸಾಮಾನ್ಯ ಜನರಿಗೆ ನ್ಯಾಯ ಸಿಗುವುದಿಲ್ಲ. ನನ್ನ ಸಹೋದರ ಬರೆದಿರುವ ಡೆತ್ ನೋಟ್ ಅನ್ನು ಪೊಲೀಸ್ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಡೆತ್ ನೋಟ್‌ನಲ್ಲಿರುವ ಕೈಬರಹ ನನ್ನ ಕಿರಿಯ ಸಹೋದರನದ್ದು ಎಂದು ನನಗೆ ಖಾತ್ರಿಯಿದೆ. ಈ ಸಂಬಂಧ ದೂರು ದಾಖಲಿಸಿದ್ದೇನೆಂದು ಹೇಳಿದರು.
ಸುರೇಖಾ ಅವರೊಂದಿಗೆ ಆಗಮಿಸಿದ್ದ ವಿಶ್ವಕರ್ಮ ಫೆಡರೇಶನ್ ರಾಜ್ಯ ಘಟಕದ ಅಧ್ಯಕ್ಷ ವಿಜಯಕುಮಾರ ಪತ್ತಾರ ಮಾತನಾಡಿ, ಸರಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ರಾಜು ಕಪನೂರ ಯಾರು, ಸಚಿನ್ ತನ್ನ ಡೆತ್ ನೋಟ್‌ನಲ್ಲಿ ಅವರ ಹೆಸರು ಹಾಗೂ ಕಪನೂರ ಅನುಯಾಯಿಗಳ ಹೆಸರನ್ನು ಏಕೆ ನಮೂದಿಸಿದ್ದಾರೆ ಮತ್ತು ಹಣಕ್ಕಾಗಿ ಏಕೆ ಬೇಡಿಕೆ ಇಟ್ಟಿದ್ದರು ಎಂಬುದನ್ನು ಸರ್ಕಾರ ಪತ್ತೆ ಹಚ್ಚಬೇಕು ಎಂದರು.
ಇದೇ ವೇಳೆ ಗುತ್ತಿಗೆದಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಗನ್ನಾಥ ಶೇಗಜಿ ಮಾತನಾಡಿ, ಮೃತ ಸಚಿನ್ ಸಂಘದ ಸದಸ್ಯನಲ್ಲ ಎಂದು ಹೇಳಿದ್ದಾರೆ.
ಸಂಘದ ಸದಸ್ಯನಾಗಿದ್ದಾನೆಂದು ಹೇಳುತ್ತಿರುವ ಕುಟುಂಬ ಸದಸ್ಯರು ಸದಸ್ಯತ್ವವನ್ನು ಸಾಬೀತುಪಡಿಸಲು ಹಾಗೂ ರಾಜು ಕಪ್ನೂರ್ ಅಥವಾ ಯಾರಾದರೂ ಕಿರುಕುಳ ನೀಡಿರುವ ಕುರಿತು ದಾಖಲೆಗಳನ್ನು ನೀಡಲಿ. ನಂತರ ಸಂಘವು ಅವರ ಪರವಾಗಿ ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.
Advertisement