
ಬೆಂಗಳೂರು: ಡಿಸೆಂಬರ್ 31ರಂದು ರಸ್ತೆಯಲ್ಲಿ ಮಲಗಿದ್ದ ಬೀದಿನಾಯಿ ಮೇಲೆ ಎಸ್‌ಯುವಿ ಹತ್ತಿಸಿ ಕ್ರೌರ್ಯ ಮೆರೆದಿದ್ದ ಬೆಂಗಳೂರಿನ ಜೆಪಿ ನಗರದ 35 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಆರೋಪಿಯನ್ನು ಜೆಪಿ ನಗರದ 8ನೇ ಹಂತದ ಶೇಖರ್ ಲೇಔಟ್ ನಿವಾಸಿ ಮಂಜುನಾಥ್ ವೆಂಕಟೇಶ್ ಎಂದು ಗುರುತಿಸಲಾಗಿದೆ. ಪ್ರಾಣಿ ಹಕ್ಕುಗಳ ಕಾರ್ಯಕರ್ತರೊಬ್ಬರು ನೀಡಿದ ದೂರಿನ ಮೇರೆಗೆ ಗುರುವಾರ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಡಿಸೆಂಬರ್ 31ರ ಸಂಜೆ 5.30ರ ಸುಮಾರಿಗೆ ನಡೆದ ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ, ಮಂಜುನಾಥ್ ಅವರು ಉದ್ದೇಶಪೂರ್ವಕವಾಗಿಯೇ ತಮ್ಮ ಮಹೀಂದ್ರ ಥಾರ್ ಅನ್ನು ನಾಯಿ ಮೇಲೆ ಹತ್ತಿಸಿರುವುದು ಕಂಡುಬಂದಿದೆ. ಇದರಿಂದ ನಾಯಿ ಸ್ಥಳದಲ್ಲೇ ಸಾವಿಗೀಡಾಗಿದ್ದು, ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದರು.
ಪ್ರಾಣಿಗಳ ಮೇಲಿನ ಕ್ರೌರ್ಯ ಕಾಯ್ದೆ-1960 ಮತ್ತು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 325 ರ ಅಡಿಯಲ್ಲಿ ತಲಘಟ್ಟಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ಭಾಗವಾಗಿ ಎಸ್‌ಯುವಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಜೆಪಿ ನಗರದಲ್ಲಿರುವ ತಮ್ಮ ಕಚೇರಿಗೆ ಧಾವಂತದಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಮಲಗಿದ್ದ ನಾಯಿ ಕಾಣಿಸಲಿಲ್ಲ ಎಂದು ಅವಿವಾಹಿತರಾಗಿರುವ ಮಂಜುನಾಥ್ ಅವರು ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ.
ಆದರೆ, ರಸ್ತೆಯಲ್ಲಿ ನಾಯಿ ಮಲಗಿರುವುದನ್ನು ಗಮನಿಸಿದ ಬಳಿಕವೇ ಉದ್ದೇಶಪೂರ್ವಕವಾಗಿ ನಾಯಿ ಮೇಲೆ ಕಾರನ್ನು ಹರಿಸಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ. ಘಟನೆ ನಂತರ, ಆರೋಪಿ ನಾಯಿಯ ದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಎಸೆದಿದ್ದಾರೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
Advertisement