
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅದ್ಧೂರಿ ವಿವಾಹವೊಂದು ದಿಢೀರ್ ಸ್ಥಗಿತವಾಗಿದ್ದು, ಅಚ್ಚರಿ ಎಂದರೆ ತಾಳಿಕಟ್ಟುವ ಕೆಲವೇ ಗಂಟೆಗಳಿಗೂ ಮುನ್ನ ಸ್ವತಃ ಮದುಮಗಳೇ ವಿವಾಹವನ್ನು ನಿಲ್ಲಿಸಿರುವ ವಿಡಿಯೋ ವೈರಲ್ ಆಗುತ್ತಿದೆ.
ಹೌದು.. ಮದುವೆ ಮನೆಗೆ ಕುಡಿದು ಬಂದು ಸ್ನೇಹಿತರೊಂದಿಗೆ ರಂಪಾಟ ಮಾಡಿದ ಎಂಬ ಕಾರಣಕ್ಕೇ ಸ್ವತಃ ಮದುಮಗಳೇ ವಿವಾಹವನ್ನು ರದ್ದು ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮದುವೆ ಶಾಸ್ತ್ರಗಳನ್ನು ಮದುಮಗ ಗೌರವಿಸಿದೇ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಆಕೆ ಮದುವೆಯನ್ನೇ ರದ್ದು ಮಾಡಿದ್ದಾಳೆ.
ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ವಿಡಿಯೋದಲ್ಲಿ ವಧು ಆರೋಪಿಸಿರುವಂತೆ ಮದುವೆ ಮನೆಗೆ ಮದುಮಗ ಕಂಠಪೂರ್ತಿ ಕುಡಿದು ಬಂದಿದ್ದು ಮಾತ್ರವಲ್ಲದೇ ಆರತಿ ತಟ್ಟೆಯನ್ನು ಎಸೆದು ಅಪಮಾನಿಸಿದ್ದಾರೆ. ಇದು ಮದುವೆ ಹೆಣ್ಣಿನ ಆಕ್ರೋಶಕ್ಕೆ ಕಾರಣವಾಗಿದ್ದು ಕೂಡಲೇ ಎದ್ದು ನಿಂತ ಮದುಮಗಳು ಸಮಾರಂಭಕ್ಕೆ ಆಗಮಿಸಿದ್ದ ಎಲ್ಲರಿಗೂ ಕ್ಷಮೆ ಕೋರಿ ಈ ಮದುವೆಗೆ ತಾನು ಸಿದ್ಧಳಿಲ್ಲ.. ಹೀಗಾಗಿ ಈ ಮದುವೆ ರದ್ದು ಮಾಡಲಾಗುತ್ತಿದೆ. ನನ್ನನ್ನು ಕ್ಷಮಿಸಿ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಇನ್ನು ವರನ ಕಡೆಯವರು ಕ್ಷಮೆ ಕೇಳಿ ಸಂಧಾನ ಮಾಡಲೆತ್ನಿಸಿದರಾದರೂ ಅದಕ್ಕೆ ಬಗ್ಗದ ವಧು ಮದುವೆ ಮುರಿಯುವ ನಿರ್ಧಾರಕ್ಕೆ ಗಟ್ಟಿಯಾಗಿ ನಿಂತಿದ್ದರು. ಅಂತೆಯೇ ವಧುವಿನ ತಾಯಿ ಮದುವೆಯಲ್ಲಿ ಗೌರವ ಮತ್ತು ಸಂಪ್ರದಾಯದ ಮಹತ್ವವನ್ನು ಒತ್ತಿ ಹೇಳಿದ್ದು, ಮದುಮಗನ ನಡವಳಿಕೆಯು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಅಲ್ಲದೆ ತನಗೆ ತನ್ನ ಮಗಳಿನ ಭವಿಷ್ಯವೇ ಮುಖ್ಯ.. ಹೀಗಾಗಿ ಮದುವೆ ಮುಂದುವರಿಸುವುದಿಲ್ಲ ಎಂದು ದಿಟ್ಟ ನಿರ್ಧಾರ ಮಾಡಿದ್ದಾರೆ.
ಇನ್ನು ಈ ಘಟನೆಯು ಕುಟುಂಬದ ಗೌರವ ಮತ್ತು ಸಂಸ್ಕೃತಿಯನ್ನು ಒಳಗೊಂಡ ಮದುವೆ ಎಷ್ಟು ಗಂಭೀರವಾಗಿದೆ ಎಂಬುದನ್ನು ಎತ್ತಿ ತೋರಿಸಿದ್ದು ಮಾತ್ರವಲ್ಲದೇ ಮದುವೆಯಂತಹ ಮಹತ್ವದ ಕಾರ್ಯಕ್ರಮಗಳ ಸಮಯದಲ್ಲಿ ಸಭ್ಯತೆಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಎತ್ತಿ ತೋರಿಸುತ್ತವೆ.
Advertisement