
ಬೆಂಗಳೂರು: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದ ಘಟನೆಗೆ ರಾಜ್ಯ ಬಿಜೆಪಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದು. ನಿಮ್ಮದೇ ಕ್ಷೇತ್ರದಲ್ಲಿ ಸಮಾಜ ತಲೆತಗ್ಗಿಸುವ ಕೃತ್ಯ ನಡೆದಿದೆ. ನೀವು ಮಾತ್ರ ಕಾಣೆ ಆಗಿರುವುದು ಏಕೆ? ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಪ್ರಶ್ನಿಸಿದೆ.
ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಮತಾಂಧರ ಅಡ್ಡೆಯಾಗಿರುವ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಿಡಿಗೇಡಿಗಳು ಬ್ಲೇಡ್‌ನಿಂದ ಗೋಮಾತೆಯ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದಾರೆ. ಸಮಾಜಘಾತುಕರು ಚಾಮರಾಜಪೇಟೆಯ ವಿನಾಯಕ ನಗರದ ನಿವಾಸಿ ಕರ್ಣ ಎಂಬುವವರಿಗೆ ಸೇರಿದ 8 ಹಸುಗಳ ಪೈಕಿ 3 ಹಸುಗಳ ಕೆಚ್ಚಲು ಕೊಯ್ದಿದ್ದಾರೆ.
ಚಾಮರಾಜಪೇಟೆಯ ಪಶು ಆಸ್ಪತ್ರೆಯನ್ನು ತೆರುವು ಮಾಡಲು ಭ್ರಷ್ಟ ಕಾಂಗ್ರೆಸ್ ಹೊಂಚು ಹಾಕಿ ಕೂತಿತ್ತು. ಈ ಹಿನ್ನೆಲೆ ಆಸ್ಪತ್ರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟಕ್ಕೆ ಹಸುಗಳ ಮಾಲೀಕ ಸಿದ್ಧರಾಗಿದ್ದರು. ಇದರ ನಡುವೆ ಇಂಥ ಅಮಾನವೀಯ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಿಸ್ಟರ್ ಜಮೀರ್ ಅವರೇ, ನಿಮ್ಮದೇ ಕ್ಷೇತ್ರದಲ್ಲಿ ಸಮಾಜ ತಲೆತಗ್ಗಿಸುವ ಕೃತ್ಯ ನಡೆದಿದೆ. ನೀವು ಮಾತ್ರ ಕಾಣೆ ಆಗಿರುವುದು ಏಕೆ? ಎಂದು ಪ್ರಶ್ನಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ. ವಿಜಯೇಂದ್ರ ಅವರು ಪೋಸ್ಟ್ ಮಾಡಿ, ಗೋವು' ಎಂದರೆ ಸಕಲ ಜೀವರಾಶಿಗಳಿಗೂ ಮಾತೆ. ಹೀಗಾಗಿ ಹಿಂದೂಗಳು ಗೋವನ್ನು ಮಾತೃದೇವತೆಯ ಸ್ಥಾನ ನೀಡಿ ಕಾಮಧೇನು ಎಂದು ಪೂಜಿಸುತ್ತಾರೆ. ಕರ್ನಾಟಕದ ಸಂಸ್ಕೃತಿಯಲ್ಲಿ ಪುಣ್ಯಕೋಟಿಯ ಕಥೆಯ ಹಾಡು ಜಗತ್ತಿನ ಮೂಲೆ ಮೂಲೆಗೂ ಪಸರಿಸಿದೆ. ನಾಡಿದ್ದು ಮಕರ ಸಂಕ್ರಾಂತಿಯಂದು ಗೋ ಮಾತೆಗೆ ಪೂಜೆ ಸಲ್ಲಿಸುವುದು ಹಬ್ಬದ ಆಚರಣೆಯ ಮಹತ್ವದ ಭಾಗ, ಇಂತಹ ಪಾವಿತ್ರ್ಯತೆಯ ಸಂದರ್ಭದಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಾಕ್ಷಸಿ ಮನಸ್ಥಿತಿಯ ಪಾಪಿಗಳು ನಿರ್ದಯವಾಗಿ ಹಸುಗಳ ಕೆಚ್ಚಲನ್ನು ಭೀಕರವಾಗಿ ಕತ್ತರಿಸಿರುವುದು ಅತ್ಯಂತ ಹೇಯ, ಅಮಾನುಷ ಹಾಗೂ ಖೂಳ ಕೃತ್ಯವಾಗಿದ್ದು ಇದನ್ನು ಬಿಜೆಪಿ ಅತ್ಯುಗ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗೋ ಸುರಕ್ಷತೆಯ ಬಗ್ಗೆ ತಾತ್ಸಾರ ಧೋರಣೆ ಅನುಸರಿಸುತ್ತಿದೆ. ಮೊನ್ನೆಯಷ್ಟೇ ಗೋಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಪ್ರಕಟಿಸಿದೆ, ಇದೆಲ್ಲವೂ ಗೋ ಭಕ್ಷಕ ಜನರ ಓಲೈಕೆಗಾಗಿ ಅಲ್ಲದೆ ಬೇರೇನೂ ಅಲ್ಲ. ಇರಿಯುವುದು, ಕತ್ತರಿಸುವುದನ್ನು ಕೇಳಿದ್ದೇವೆ, ಆದರೆ ಮಾತೃ ಕೊರತೆ ನೀಗಿಸಲು ಕ್ಷೀರಧಾರೆ ಹರಿಸುವ ಕೆಚ್ಚಲನ್ನೇ ಕತ್ತರಿಸುವಷ್ಟು ಪರಮ ನೀಚ ಕೃತ್ಯಕ್ಕೆ ಇಳಿದಿರುವ ಘಟನೆ ಕರ್ನಾಟಕದ ರಾಜಧಾನಿಯಲ್ಲೇ ನಡೆಯುತ್ತಿದೆ ಎಂದರೆ ಇದರ ಹಿಂದಿರುವ ಕುಮ್ಮಕ್ಕಿನ ಶಕ್ತಿ ಯಾವುದು ಎನ್ನುವುದು ಊಹಿಸಿಕೊಳ್ಳದಷ್ಟು ಕರುನಾಡಿನ ಜನತೆ ಮುಗ್ಧರಲ್ಲ, ಕೃತ್ಯ ನಡೆದಿರುವ ಕ್ಷೇತ್ರ ಯಾರ ಮುಷ್ಠಿಯಲ್ಲಿದೆ, ಈ ರಾಜ್ಯ ಆಳುತ್ತಿರುವವರ ಮನಸ್ಥಿತಿ ಯಾರ ಪರವಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ.
ದಿನದಿಂದ ದಿನಕ್ಕೆ ಹಿಂದೂ ಆಚಾರ -ವಿಚಾರ ಹಾಗೂ ಜನರ ಮೇಲೆ ನಡೆಯುತ್ತಿರುವ ಅಟ್ಟಹಾಸ ಮೇರೆ ಮೀರುತ್ತಿದೆ. ಜನರ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಎಚ್ಚೆತ್ತುಕೊಂಡು ಇಂತಹ ಕೃತ್ಯಗಳ ಹಿಂದಿರುವ ಶಕ್ತಿಯನ್ನು ಬಗ್ಗು ಬಡಿಯದಿದ್ದರೆ ಇದಕ್ಕೆ ಕುಮ್ಮಕ್ಕು ನೀಡುತ್ತಿರುವವರು ಸರ್ಕಾರದೊಳಗಿನ ಶಕ್ತಿಗಳು ಎಂಬ ತೀರ್ಮಾನಕ್ಕೆ ಜನ ಬರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪ್ರತಿಕ್ರಿಯಿಸಿ, ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಗೋಮಾತೆಯ ಕೆಚ್ಚಲು ಕತ್ತರಿಸಿದ ಪಾಪಿಗಳನ್ನು ಸರ್ಕಾರ ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಗೋವು ಭಾರತೀಯರಿಗೆ ತಾಯಿ ಸಮಾನ. ಅದರಲ್ಲೂ ಸಂಕ್ರಾಂತಿ ಹಬ್ಬದಲ್ಲಿ ಗೋವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಸಂಕ್ರಾಂತಿ ಹಬ್ಬದ ಸಮಯದಲ್ಲೇ ಹಸುವಿನ ಕೆಚ್ಚಲು ಕೊಯ್ದುಹಾಕುವ ಮೂಲಕ ಮತಾಂಧ ಶಕ್ತಿಗಳು ಹಿಂದೂಗಳಿಗೆ ಸವಾಲು ಹಾಕಿವೆ. ಇಂತಹ ಜಿಹಾದಿ ಮನಸ್ಥಿತಿಯನ್ನು ನಮ್ಮ ರಾಜ್ಯ ಈವರೆಗೂ ಕಂಡಿರರಿಲ್ಲ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವೇಳೆ ಕರಸೇವಕರ ಮೇಲಿನ 30 ವರ್ಷದ ಹಳೇ ಕೇಸುಗಳು ರೀ ಓಪನ್ ಆಗುತ್ತವೆ. ಗಣೇಶ ಹಬ್ಬದ ಸಂದರ್ಭದಲ್ಲಿ ಕೋಮುದಳ್ಳುರಿ ನಡೆಯುತ್ತದೆ. ದಸರಾ ಹಬ್ಬದ ಸಂದರ್ಭದಲ್ಲಿ ದುರ್ಗಾಮತೆಯ ಮೆರವಣಿಗೆಯಲ್ಲಿ ಗಲಾಟೆ ಆಗುತ್ತದೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಪದೇ ಪದೇ ಈ ಕೋಮುಗಲಭೆಗಳು ಯಾಕೆ ನಡೆಯುತ್ತಿವೆ? ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣದಿಂದ ಮತಾಂಧ ಶಕ್ತಿಗಳಿಗೆ ಕೊಂಬು ಬಂದಿದೆ. ಮೂಲಭೂತವಾದಿಗಳಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ.
ಚಾಮರಾಜಪೇಟೆಯಲ್ಲಿ ನಡೆದಿರುವ ಈ ಅಮಾನುಷ ಘಟನೆಯನ್ನ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ತುಷ್ಟೀಕರಣ ರಾಜಕಾರಣಕ್ಕಾಗಿ ಸಮಾಜದ ಶಾಂತಿ, ಸುವ್ಯವಸ್ಥೆಯನ್ನು ಬಲಿ ಕೊಡದೆ ಮತಾಂಧ ಶಕ್ತಿಗಳ ಹೆಡೆಮುರಿ ಕಟ್ಟುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
Advertisement