
ರಾಮನಗರ: ಕಳ್ಳನೊಬ್ಬನನ್ನು ಹಿಡಿದಿದ್ದ ಜನರ ಗುಂಪೊಂದು, ಆತನ ಸಹಚರ ಎಂದು ತಪ್ಪಾಗಿ ತಿಳಿದು 24 ವರ್ಷದ ಸೆಕ್ಯೂರಿಟಿ ಗಾರ್ಡ್ ಎಡಗೈ ಕತ್ತರಿಸಿರುವ ಘಟನೆ ಕನಕಪುರ ಬಳಿಕ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಸಂತ್ರಸ್ತನನ್ನು ಕನಕಪುರದ ಬೇಲಿಕೊತ್ತನೂರು ಗ್ರಾಮದ ಎಸ್. ವಿನಯ್ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದುರದೃಷ್ಟವಶಾತ್ ಮಣಿಕಟ್ಟಿನಲ್ಲಿ ತುಂಡಾಗಿರುವ ಕೈಯನ್ನು ಉಳಿದ ತೋಳಿಗೆ ಜೋಡಿಸಲು ಸಾಧ್ಯವಾಗಿಲ್ಲ. ಕೃತಕ ಕೈ ಅಳವಡಿಕೆಗೆ ವೈದ್ಯರು ಸಲಹೆ ಮಾಡಿದ್ದಾರೆ.
ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಎರಡನೇ ಹಂತದಲ್ಲಿರುವ Pyrodynamics ಕಂಪನಿಯ ಆವರಣದ ಹೊರಗಡೆ ಗುರುವಾರ ರಾತ್ರಿ 10-30 ರಿಂದ 10-40ರ ಸುಮಾರಿನಲ್ಲಿ ಈ ಘಟನೆ ನಡೆದಿದೆ.
ಕಚೇರಿ ಆವರಣದಲ್ಲಿ ಕರ್ತವ್ಯದಲ್ಲಿದ್ದ ವಿನಯ್ 'ಕಳ್ಳ ಕಳ್ಳ' ಎಂದು ಯಾರೋ ಕೂಗಿದ್ದರಿಂದ ಹೊರಗೆ ಬಂದಿದ್ದರು. ಕಂಪನಿಯಲ್ಲಿ ಕಳ್ಳತನ ನಡೆದಿದೆ ಎಂದು ಭಾವಿಸಿ ಹೊರಗೆ ಬಂದು ನೋಡಿದಾಗ ಕಳ್ಳನೆಂದು ಆರೋಪಿಸಲಾದ ಮಾಗಡಿ ನಿವಾಸಿ ಚೇತನ್ ನಿಗೆ ಜನರ ಗುಂಪೊಂದು ಥಳಿಸುತ್ತಿರುವುದು ಕಂಡು ಬಂದಿದೆ.
ಈ ಮಧ್ಯೆ ಚೇತನ್ ಸಹಚರ ಎಂದು ತಪ್ಪಾಗಿ ತಿಳಿದ ಗುಂಪು ಮಚ್ಚಿನಿಂದ ವಿನಯ್ ಎಡಗೈ ಕತ್ತರಿಸಿದೆ. ಗಾಯಗೊಂಡ ವಿನಯ್ ಫ್ಯಾಕ್ಟರಿಗೆ ತೆರಳಿ ತನ್ನ ಸಹೋದರ ತೇಜಸ್ ಗೌಡನಿಗೆ ಸಹಾಯಕ್ಕಾಗಿ ಕರೆ ಮಾಡಿದ್ದಾನೆ. ಅಲ್ಲದೇ 112 ಗೆ ಕರೆ ಮಾಡಿದ್ದು, ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿನಯ್ ನನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆಂಬ್ಯುಲೆನ್ಸ್ ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಯಿತು.
ಈ ಘಟನೆ ಸಂಬಂಧ ಶುಕ್ರವಾರ ತೇಜಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಕಳ್ಳ ಚೇತನ್ ನನ್ನು ಬಂಧಿಸಲಾಗಿದೆ. ವಿನಯ್ ಮೇಲೆ ಹಲ್ಲೆ ನಡೆದ ಆರೋಪಿಗಳ ಪೈಕಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹಾರೋಹಳ್ಳಿ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
Advertisement