
ಬೆಂಗಳೂರು: ಎಟಿಎಂಗೆ ಹಣ ತುಂಬಿಸಲು ಬಂದಿದ್ದ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ, ಹಾಡಹಗಲೇ ದರೋಡೆ ಮಾಡಿ ಆತಂಕ ಮೂಡಿಸಿದ್ದ ಖದೀಮರ ಗುರುತು ಪತ್ತೆಯಾಗಿದ್ದು, ಶೀಘ್ರದಲ್ಲೇ ಬಂಧನಕ್ಕೊಳಪಡಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಶುಕ್ರವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರೋಡೆಕೋರ ಇಬ್ಬರು ಆರೋಪಿಗಳ ಗುರುತನ್ನು ಪತ್ತೆ ಹಚ್ಚಲಾಗಿದೆ. ಅವರನ್ನು ಪೊಲೀಸರು ಟ್ರ್ಯಾಕ್ ಮಾಡಿ ಹಿಂಬಾಲಿಸುತ್ತಿದ್ದಾರೆ. ಮಧ್ಯಪ್ರದೇಶದ ಇಂದೋರ್ ಸೇರಿದಂತೆ ಇತರೆ ಪ್ರದೇಶಗಳಿಗ ಪೊಲೀಸರ ತಂಡ ತೆರಳಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆಂದು ಹೇಳಿದರು.
ಬೀದರ್ ನಲ್ಲಿ ದರೋಡೆ ನಡೆಸಿದ ಬಳಿಕ ಆರೋಪಿಗಳು ಹೈದರಾಬಾದ್‌ಗೆ ಪರಾರಿಯಾಗಿದ್ದಾರೆ. ನಗದು ತುಂಬಿದ ಟ್ರಂಕ್ ಅನ್ನು ಹೊತ್ತೊಯ್ದು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಸಾಮಾನ್ಯವಾಗಿ ದೊಡ್ಡ ಮೊತ್ತದ ನಗದು ಸಾಗಿಸುವಾಗ ಬಂದೂಕುಧಾರಿಗಳು ಜೊತೆಯಲ್ಲಿರುತ್ತಾರೆ. ದುರದೃಷ್ಟವಶಾತ್ ನಿನ್ನೆ ವಾಹನದಲ್ಲಿ ಗನ್ ಮ್ಯಾನ್ ಇರಲಿಲ್ಲ. ಬ್ಯಾಂಕ್ ಸಿಬ್ಬಂದಿ ಎಟಿಎಂಗೆ ಹಣ ತುಂಬುವ ಕಾರ್ಯವಿಧಾನವನ್ನು ಬಹಳ ಸಮಯದಿಂದ ಪರಿಶೀಲನೆ ಮಾಡಿ, ಸಂಚು ರೂಪಿಸಿರುವಂತೆ ಕಾಣುತ್ತಿದೆ ಎಂದು ತಿಳಿಸಿದರು.
ಬೀದರ್‌ನಲ್ಲಿ ಬ್ಯಾಂಕ್ ಸಿಬ್ಬಂದಿ ಮೇಲೆ ಇಬ್ಬರು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಶೂಟೌಟ್ ಮಾಡಿ 93 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದ್ದರು. ಘಟನೆಯಲ್ಲಿ ವೆಂಕಟೇಶ್ ಮತ್ತು ಶಿವ ಕಾಶಿನಾಥ್ ಎಂಬುವವರು ಮೃತಪಟ್ಟಿದ್ದಾರೆ. ಇಬ್ಬರು ಸಿಎಂಎಸ್ ಏಜೆನ್ಸಿಯ ಸಿಬ್ಬಂದಿಗಳಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಿವಾಜಿ ಚೌಕ್‌ನಲ್ಲಿರುವ ಎಟಿಎಂಗೆ ಸಿಬ್ಬಂದಿ ಬೆಳಗ್ಗೆ 11:30ಕ್ಕೆ ಹಣ ತುಂಬಲು ಬಂದಿದ್ದಾಗ, ಘಟನೆ ನಡೆದಿದೆ. ದುಷ್ಕರ್ಮಿಗಳು ಒಟ್ಟು 8 ಸುತ್ತು ಗುಂಡು ಹಾರಿಸಿದ್ದರು ಎಂದು ಮೂಲಗಳು ತಿಳಿಸಿವೆ.
Advertisement