Mandya ಭೀಕರ ಅಪಘಾತ: ಮದುವೆ ನಿಶ್ಚಯವಾಗಿದ್ದ NREGA ಎಂಜಿನಿಯರ್ ಸಾವು!
ಮಂಡ್ಯ: ಮಂಡ್ಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮದುವೆ ನಿಶ್ಚಯವಾಗಿದ್ದ 25 ವರ್ಷದ ಯುವತಿ ಸಾವಿಗೀಡಾಗಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಸಾಪುರ ಗೇಟ್ ಬಳಿ ಈ ಘಟನೆ ನಡೆದಿದ್ದು, ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ 25 ವರ್ಷದ ಬಿಕೆ ಶರಣ್ಯಗೌಡ ಎಂಬ ಯುವತಿ ಸಾವನ್ನಪ್ಪಿದ್ದಾರೆ.
ಮೂಲತಃ ಮಂಡ್ಯದ ಮಳವಳ್ಳಿ ತಾಲೂಕಿನ ಬಳೆಹೊನ್ನಿಗ ಗ್ರಾಮದ ನಿವಾಸಿ ಕೃಷ್ಣೇಗೌಡ ಅವರ ಪುತ್ರಿ ಶರಣ್ಯ ಗೌಡ ಅವರು ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಕನಕಪುರ ತಾಲೂಕಿನ ಸಾತನೂರು ಪಂಚಾಯತಿಯಲ್ಲಿ ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಸ್ವಗ್ರಾಮ ಬಳೆಹೊನ್ನಿಗನದಿಂದ ಹಲಗೂರಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ನಿನ್ನೆ ಸ್ವಗ್ರಾಮದಿಂದ ಹಲಗೂರಿಗೆ ಹೋಗ್ತಿದ್ದಾಗ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಶರಣ್ಯ ಕೆಲಸಕ್ಕಾಗಿ ಹಲಗೂರಿಗೆ ಪ್ರಯಾಣಿಸುತ್ತಿದ್ದಾಗ ಅವರ ಸ್ಕೂಟರ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ತೀವ್ರ ರಸ್ತಸ್ರಾವದಿಂದ ಶರಣ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲಗೂರು ಪೊಲೀಸರು ನೀಡಿರುವ ಮಾಹಿತಿ ಅನ್ವಯ, ಶರಣ್ಯ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ತಲೆಗೆ ತೀವ್ರ ಗಾಯಗಳಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹೆಲ್ಮೆಟ್ ಧರಿಸಿದ್ದ ಇನ್ನೊಂದು ಬೈಕ್ ಸವಾರನ ಕೈಗಳಿಗೆ ಗಾಯಗಳಾಗಿವೆ. ಅವರು ಪ್ರಸ್ತುತ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮದುವೆ ನಿಶ್ಚಯವಾಗಿತ್ತು
ಇನ್ನು ಮೃತ ಶರಣ್ಯ ಗೌಡಗೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ. ಮುಂದಿನ ತಿಂಗಳು ಫೆಬ್ರವರಿ 16ರಂದು ಶರಣ್ಯ ಮದುವೆ ನಿಶ್ಚಿಯವಾಗಿತ್ತು. ಆದರೆ, ದಾಂಪತ್ಯ ಜೀವನಕ್ಕೆ ಕಾಲಿಡುವ ಮೊದಲೇ ಆಕೆ ದುರಂತ ಅಂತ್ಯ ಕಂಡಿದ್ದಾರೆ.