
ಬೆಂಗಳೂರು: 2ನೇ ವಿವಾಹಕ್ಕೆ ಸಜ್ಜಾಗುತ್ತಿದ್ದ ಪ್ರಿಯತಮೆಯ ಹತ್ಯೆ ಮಾಡಿ, ಆತ್ಮಹತ್ಯೆ ಕಥೆ ಕಟ್ಟಿದ್ದ ವ್ಯಕ್ತಿಯನ್ನು ಹೆಚ್ಎಎಲ್ ಠಾಣೆ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.
ಮೃತರನ್ನು ಉಜ್ಮಾ ಖಾನ್ (45) ಎಂದು ಗುರುತಿಸಲಾಗಿದ್ದು, ಪ್ರಕರಣ ಸಂಬಂಧ ಇಮಾದ್ ಬಾಷಾ (53) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಹತ್ಯೆಯಾದ ಉಜ್ಮಾ ಖಾನ್ ಹಾಗೂ ಆರೋಪಿ ಇಮಾದ್ ಬಾಷಾ ಸಂಬಂಧಿಕರಾಗಿದ್ದು, ಇಬ್ಬರಿಗೂ ಬೇರೆ ಬೇರೆ ವಿವಾಹವಾಗಿತ್ತು. ಮುಂಬೈನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಇಮಾದ್, 2017ರಲ್ಲಿ ಹೆಂಡತಿಯನ್ನು ತೊರೆದು ಬೆಂಗಳೂರಿಗೆ ಬಂದಿದ್ದ. ಇತ್ತ ಗಂಡನನ್ನು ತೊರೆದಿದ್ದ ಉಜ್ಮಾ, ಇಮಾದ್‌ನನ್ನು ಪ್ರೀತಿಸಲಾರಂಭಿಸಿದ್ದಳು. ಆರಂಭದಲ್ಲಿ ಥಣಿಸಂದ್ರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಪ್ರತ್ಯೇಕ ಫ್ಲ್ಯಾಟ್ಗಳಲ್ಲಿ ಇಮಾದ್ ಹಾಗೂ ಉಜ್ಮಾ ವಾಸವಿದ್ದರು.
10 ತಿಂಗಳುಗಳ ಬಳಿಕ ಮತ್ತೆ ಮುಂಬೈಗೆ ವಾಪಸಾಗಲು ನಿರ್ಧಾರ ಮಾಡಿದ್ದ ಇಮಾದ್, ಎರಡೂ ಫ್ಲ್ಯಾಟ್ ಖಾಲಿ ಮಾಡಿದ್ದ. ಹೀಗಾಗಿ, ಉಜ್ಮಾ ಹೆಚ್ಬಿಆರ್ ಲೇಔಟ್‌ನಲ್ಲಿರುವ ತನ್ನ ತಾಯಿಯ ಮನೆ ಸೇರಿಕೊಂಡಿದ್ದಳು. ಇದಾದ ಕೆಲ ತಿಂಗಳುಗಳ ಬಳಿಕ ಪುನಃ ಬೆಂಗಳೂರಿಗೆ ಮರಳಿದ್ದ ಇಮಾದ್, ಕುಂದಲಹಳ್ಳಿಯ ದೀಪಂ ನಿವಾಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸಲಾರಂಭಿಸಿದ್ದ. ಉಜ್ಮಾ ಸಹ ಆಗಾಗ ಇಮಾದ್ ಮನೆಗೆ ಬಂದು ಹೋಗುತ್ತಿದ್ದಳು. ಆದರೆ, 2024ರಲ್ಲಿ ಉಜ್ಮಾಗೆ ಬೇರೊಂದು ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಆಸ್ಟ್ರಿಯಾ ದೇಶದಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ಅರ್ಶದ್ ಎಂಬಾತನೊಂದಗೆ ವಿವಾಹಕ್ಕೆ ಸಿದ್ಧತೆ ನಡೆದಿದ್ದವು. ಈ ನಡುವೆ ಈ ಮೊದಲೇ ಉಜ್ಮಾಳ ಮೊಬೈಲ್ ಫೋನ್ ಕ್ಲೋನ್ (Clone) ಮಾಡಿಕೊಂಡಿದ್ದ ಇಮಾದ್‌ಗೆ ಈ ವಿಚಾರಗಳು ಗೊತ್ತಾಗಿದ್ದವು.
ಇದರಿಂದ ಕೆರಳಿದ್ದ ಇಮಾದ್, 2024ರ ಡಿಸೆಂಬರ್ 31ರಂದು ತಾನೇ ಮಾಡಿರುವ ಅಡುಗೆಯ ಫೋಟೋವನ್ನು ಉಜ್ಮಾಳಿಗೆ ಕಳುಹಿಸಿದ್ದ, ಆಕೆಯನ್ನು ತನ್ನ ಮನೆಗೆ ಆಹ್ವಾನಿಸಿ. ಈ ಸಂದೇಶಕ್ಕೆ ಉಜ್ಮಾ ಪ್ರತಿಕ್ರಿಯಿಸಿ, ರಾತ್ರಿ 9.30ರ ಸುಮಾರಿಗೆ ಇಮಾದ್‌ನ ಮನೆ ತಲುಪಿದ್ದಳು. ಬಳಿಕ ಉಜ್ಮಾಳಿಗೆ ಊಟದಲ್ಲಿ ವಿಷ ಬೆರೆಸಿ ಕೊಟ್ಟು ಹತ್ಯೆ ಮಾಡಿದ್ದಾನೆ. ನಂತರ ತಾನೂ ಹಾರ್ಪಿಕ್ ಸೇವಿಸಿ ಮೃತಳ ಸೋದರಿಗೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೆಸೇಜ್ ಮಾಡಿದ್ದಾನೆ.
ಸಂದೇಶ ನೋಡಿದ ಕೂಡಲೇ ಆಕೆ ಪೊಲೀಸರಿಗೆ ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ತೆರಳಿ ಅಸ್ವಸ್ಥರಾಗಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು.
ಮೃತದೇಹ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಜ್ಮಾ ಮೃತಪಟ್ಟು 10-12 ಗಂಟಗಳಾಗಿವೆ ಎಂದು ಉಲ್ಲೇಖವಾಗಿತ್ತು. ಆಗ ತನ್ನ ಸಂಬಂಧಿಕರಿಗೆ ಬಾಷ ಮಾಡಿದ್ದ ಮಸೇಜ್ ಸಮಯಕ್ಕೂ ಉಜ್ಮಾ ಮೃತಪಟ್ಟ ಸಮಯಕ್ಕೂ ತಾಳೆ ಹಾಕಿದಾಗ ಪೊಲೀಸರಿಗೆ ಅನುಮಾನ ಬಂದಿದೆ. ಬಳಿಕ ಇಮಾದ್ ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಮೊದಲು ಅಸಹಜ ಸಾವು ಪ್ರಕರಣವೆಂದು ದಾಖಲಾಗಿದ್ದ ಪ್ರಕರಣವನ್ನು ಇದೀಗ ಕೊಲೆ ಅಪರಾಧವೆಂದು ಬದಲಾಯಿಸಿ, ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement