ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪವನ್ನು ಗೃಹ ಸಚಿವ ಜಿ ಪರಮೇಶ್ವರ್ ತಳ್ಳಿಹಾಕಿದ್ದಾರೆ. ರಾಜ್ಯದಲ್ಲಿ ದರೋಡೆ ಮತ್ತು ಕೊಲೆಗಳ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ ಎಂದು ಹೇಳಿದ್ದು ಬಿಜೆಪಿ ಆರೋಪಗಳನ್ನು ಆಧಾರರಹಿತ ಎಂದು ಕರೆದಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ಚೆನ್ನಾಗಿದೆ. ಪದೇ ಪದೆ ದರೋಡೆ, ಕೊಲೆಗಳು ನಡೆಯುತ್ತಿವೆ ಎಂಬ ಆರೋಪ ನಿರಾಧಾರ, ಇಂತಹ ಘಟನೆಗಳು ನಡೆಯಲು ಬಿಡುವುದಿಲ್ಲ ಎಂದು ಹೇಳಿದರು. ಮಂಗಳೂರು ನಗರದ ಉಳ್ಳಾಲ ವಲಯದ ಸಹಕಾರಿ ಬ್ಯಾಂಕ್‌ನಲ್ಲಿ ಶುಕ್ರವಾರ ಬೆಳಗ್ಗೆ ಶಸ್ತ್ರಸಜ್ಜಿತ ತಂಡವೊಂದು ಕೋಟ್ಯಂತರ ರೂ. ಮೌಲ್ಯದ ನಗದು ಮತ್ತು ಚಿನ್ನವನ್ನು ದೋಚಿತ್ತು. ಎರಡು ದಿನಗಳಲ್ಲಿ ಕರ್ನಾಟಕದಲ್ಲಿ ನಡೆದ ಎರಡನೇ ದೊಡ್ಡ ಬ್ಯಾಂಕ್ ದರೋಡೆ ಇದಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಲ್ಲಿಂದು ಬೆಳ್ಳಂಬೆಳಗ್ಗೆಯೇ ತುಂತುರು ಮಳೆಯಾಗಿದೆ. ಮಳೆಯ ಜೊತೆ ಮೈಕೊರೆವ ಚಳಿಯಿಂದಾಗಿ ಜನರು ತತ್ತರಿಸಿದ್ದಾರೆ. ರಾಜ್ಯದ ಹಲವೆಡೆ ಮುಂದಿನ ಐದು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನ ಕನಿಷ್ಠ ತಾಪಮಾನ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿದಿದೆ. ಕೋರಮಂಗಲ, ಎಚ್‌ಎಸ್‌ಆರ್ ಬಡಾವಣೆ, ದೊಮ್ಮಲೂರು, ಹನೂರು, ಹೊರಮಾವು, ಕಿತ್ತಗಾನಹಳ್ಳಿ, ಚನ್ನಸಂದ್ರ, ಶ್ರೀನಗರ, ವಿವಿಪುರಂ, ಜಯನಗರ, ಜೆಪಿನಗರ ಎಚ್‌ಎಎಲ್ ವಿಮಾನ ನಿಲ್ದಾಣ ಸೇರಿದಂತೆ ನಗರ ಅನೇಕ ಬಡಾವಣೆಗಳಲ್ಲಿ ತುಂತುರು ಮಳೆಯಾಗಿದೆ.
ಠಾಣೆಗೆ ಮುತ್ತಿಗೆ ಹಾಕಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮಹಿಳೆಯರು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ವಿರುದ್ಧ ಚಾಮರಾಜಪೇಟೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಟಿಪ್ಪುನಗರ ಮಸೀದಿ ಸಮಿತಿ ಅಧ್ಯಕ್ಷ ಮೆಹಬೂಬ್ ಖಾನ್, ಶಬ್ಬೀರ್, ಮಸೂದ್, ಸಿದ್ದಿಕ್ ಮತ್ತು ಇತರೆ 40 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಜನವರಿ 14ರಂದು ಐವರ ಯುವಕರ ಗುಂಪೊಂದು 21 ವರ್ಷದ ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿ, ವಾಹನವನ್ನು ಹಾನಿಗೊಳಿಸಿತ್ತು. ಈ ಸಂಬಂಧ ನಯಮತ್ ಪಾಷಾ ದೂರು ದಾಖಲಿಸಿದ್ದರು. ಈ ಸಂಬಂಧ ಸಬ್ ಇನ್‌ಸ್ಪೆಕ್ಟರ್ ತನಿಖೆ ನಡೆಸಿ, ಪಾಷಾನನ್ನು ಟಿಪ್ಪುನಗರದ ಮಸೀದಿ ಬಳಿ ಕರೆದೊಯ್ದು ಪರಿಶೀಲನೆ ನಡೆಸಿದ್ದರು. ಈ ವಿಚಾರ ತಿಳಿದ ಆರೋಪಿಗಳಾದ ಚಂದನ್, ಸಲೀಂ, ಮಸೂದ್, ಶಬ್ಬೀರ್ ಮಹಿಳೆಯರು ಸೇರಿದಂತೆ 40 ಮಂದಿಯನ್ನು ಠಾಣೆ ಮುಂದೆ ಜಮಾಯಿಸುವಂತೆ ಮಾಡಿ, ಪ್ರತಿಭಟೆ ನಡೆಸಿದರು.
ಕಸ್ಟಮ್ಸ್ ಹಾಗೂ ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿ ವಿಜಯ್ ಕುಮಾರ್ ಎಂಬುವರನ್ನು ಬೆದರಿಸಿ 11 ಕೋಟಿ ರೂ. ವಸೂಲಿ ಮಾಡಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕರಣ್, ತರುಣ್ ನಟಾನಿ ಹಾಗೂ ಧವಲ್ ಶಾ ಬಂಧಿತರು. ಟೆಕ್ಕಿಯೊಬ್ಬರಿಗೆ ಬೆದರಿಸಿದ್ದ ಆರೋಪಿಗಳು, 1 ತಿಂಗಳುಕಾಲ ಪೀಡಿಸಿ ವಿವಿಧ ಖಾತೆಗಳಿಗೆ 11 ಕೋಟಿ ರೂ. ವರ್ಗಾಯಿಸಿಕೊಂಡಿದ್ದರು. ಈ ಬಗ್ಗೆ ಟೆಕ್ಕಿ ದೂರು ನೀಡಿದ್ದರು. ಮತ್ತೊಂದೆಡೆ ಸೈಬರ್ ವಂಚನೆಯ ಪ್ರಕರಣಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ವಂಚಕರು ಮಾತ್ರ ತಮ್ಮ ಹೊಸ ದಾರಿ ಹುಡುಕಿಕೊಂಡಿದ್ದಾರೆ. ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಹೊಸ ಮೊಬೈಲ್ ಕಳುಹಿಸಿ ಟೆಕ್ಕಿ ಮೊಬೈಲ್‌ಗೆ ಸಿಮ್ ಹಾಕಿದ ತಕ್ಷಣ ಅವರ ಖಾತೆಯಲ್ಲಿದ್ದ 2.80 ಕೋಟಿ ರೂ. ಕಳೆದುಕೊಂಡಿದ್ದಾರೆ.
ಜಮೀನು ವಿವಾದ ಇತ್ಯರ್ಥಪಡಿಸುವ ಮಾತುಕತೆ ವೇಳೆ ಪರಿಶಿಷ್ಟ ಸಮುದಾಯದ ಕುರಿತು ಹಗುರವಾಗಿ ಮಾತನಾಡಿದ್ದ ಕಲಬುರಗಿಯ ರಟಕಲ್ ಪೊಲೀಸ್ ಠಾಣೆಯ ಪಿಎಸ್‌ಐ ಗಂಗಮ್ಮ ಅಮಾನತುಗೊಂಡಿದ್ದಾರೆ. ಕಾಳಗಿ ತಾಲೂಕಿನ ರಟಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸೇರಿ ಗ್ರಾಮದ ಅಣಬಸಪ್ಪಗೌಡ ಪಾಟೀಲ್ ಹಾಗೂ ದೊಡ್ಡಪ್ಪಗೌಡ ಕುಟುಂಬದ ಮಧ್ಯೆ ಉಂಟಾಗಿರುವ ಜಮೀನು ವಿವಾದವನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಲು ಯತ್ನಿಸುತ್ತಿದ್ದರು. ಈ ವೇಳೆ ಪಿಎಸ್‌ಐ ಗಂಗಮ್ಮ ಉಭಯ ಕುಟುಂಬದ ಸದಸ್ಯರನ್ನು ಉದ್ದೇಶಿಸಿ ಪರಿಶಿಷ್ಟ ಸಮುದಾಯವನ್ನು ನಿಂದಿಸುವ ಪದ ಬಳಸಿದ್ದಾರೆ. ಈ ಕುರಿತು ವಿಡಿಯೋ ತುಣುಕು ವೈರಲ್ ಆಗಿತ್ತು. ಭಾರತೀಯ ದಲಿತ ಪ್ಯಾಂಥರ್ ಮತ್ತು ದಲಿತ ಸೇನೆ ಪದಾಧಿಕಾರಿಗಳು ಚಿಂಚೋಳಿ ಡಿವೈಎಸ್ಪಿ ಹಾಗೂ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು.
Advertisement