
ಬೆಂಗಳೂರು: ನಗರದ ಜನನಿಬಿಡ ಕೆಆರ್ ಮಾರುಕಟ್ಟೆ ಬಳಿಯೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ವರದಿಯಾಗಿದ್ದು, ಈ ಸಂಬಂಧ ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಿಳುನಾಡು ಮೂಲದ ಮಹಿಳೆಯೊಬ್ಬರ ಮೇಲೆ ಕೆಆರ್ ಮಾರುಕಟ್ಟೆ ಗೋಡೌನ್ ಸ್ಟ್ರೀಟ್‌ನಲ್ಲಿ ಇಬ್ಬರು ವ್ಯಕ್ತಿಗಳು ಅತ್ಯಾಚಾರ ಎಸಗಿದ್ದಾರೆ. ಬಳಿಕ ಮಹಿಳೆಯ ಬಳಿಯಿದ್ದ ಚಿನ್ನದ ಆಭರಣಗಳು ಮತ್ತು ಮೊಬೈಲ್ ಕಸಿದುಕೊಂಡಿದ್ದಾರೆ.
ಪತಿಯೊಂದಿಗೆ ಜಗಳವಾಡಿದ್ದ ಮಹಿಳೆ ತಮಿಳುನಾಡಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಕೆಆರ್ ಮಾಕುಕಟ್ಟೆಯಲ್ಲಿ ಯಲಹಂಕಕ್ಕೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ ವೇಳೆ ಇಬ್ಬರು ಆರೋಪಿಗಳು ಬಂದಿದ್ದಾರೆ. ಬಸ್ ಎಲ್ಲಿ ಸಿಗುತ್ತದೆ ಎಂದು ವಿಚಾರಿಸುತ್ತಿದ್ದ ಮಹಿಳೆಯನ್ನು ಆರೋಪಿಗಳು ತೋರಿಸುತ್ತೇವೆ ಎಂದು ಹೇಳಿ ಸಮೀಪದಲ್ಲೇ ಇದ್ದ ಗೋಡೌನ್ ಸ್ಟ್ರೀಟ್‌ಗೆ ಕರೆದೊಯ್ದಿದ್ದಾರೆ. ಬಳಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ.
ಈ ಸಂಬಂಧ ಸಂತ್ರಸ್ತೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಕೆಲವು ಕಡೆಗಳಲ್ಲಿ ಆರೋಪಿಗಳು ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಆರೋಪಿಗಳ ಬಂಧನ
ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಶರವಣ ಮತ್ತು ಗಣೇಶ್ ಎಂದು ಗುರುತಿಸಲಾಗಿದೆ.
Advertisement