
ಬೆಂಗಳೂರು: ಶಾಪಿಂಗ್'ಗೆ ಕರೆದುಕೊಂಡು ಹೋಗಲಿಲ್ಲ ಎಂಬ ಕಾರಣಕ್ಕೆ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದು, ಈ ನಡುವೆ ಆತ್ಮಹತ್ಯೆ ವಿಚಾರ ಪೊಲೀಸರಿಗೆ ತಿಳಿಸದೆ ಅಂತ್ಯಸಂಸ್ಕಾರ ನೆರವೇರಿಸಿದ ಪೋಷಕರು ಸಂಕಷ್ಟಕ್ಕೆ ಸಿಲುಕಿರುವ ಘಟನೆಯೊಂದು ನಗರದಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ಸೋಲೂರಿನ ಬಸವನಹಳ್ಳಿ ನಿವಾಸಿ ಧೃತಿ ಜಿ ಆತ್ಮಹತ್ಯೆಗೆ ಶರಣಾದ ಬಾಲಕಿ. ಶನಿವಾರ ಸಂಜೆ 4 ರಿಂದ 5 ಗಂಟೆಯ ನಡುವೆ ಪೋಷಕರು ಮನೆಯಲ್ಲಿ ಇಲ್ಲದ ವೇಳೆ ನೇಣು ಬಿಗುದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕೃಷಿಕರಾದ ಆಕೆಯ ತಂದೆ ಗಂಗಾಧರಯ್ಯ ಮತ್ತು ತಾಯಿ ಸಂಬಂಧಿಕರ ಮದುವೆಗೆಂದು ಶಾಪಿಂಗ್'ಗೆ ಹೋಗಿದ್ದರು. ದಂಪತಿಗೆ ದೃತಿ ಒಬ್ಬಳೇ ಮಗಳಿದ್ದು, ಈಕೆ ಪಿಯುಸಿ ಓದುತ್ತಿದ್ದಳು. ತನ್ನನ್ನು ಶಾಂಪಿಂಗ್'ಗೆ ಕರೆದುಕೊಂಡು ಹೋಗದ್ದಕ್ಕೆ ಬೇಸರಗೊಂಡಿದ್ದಳು. ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಕಾಲೇಜಿನಿಂದ ಮನೆಗೆ ಬಂದಿರುವ ಆಕೆ, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ನಡುವೆ ಸಂಜೆ 5 ಗಂಟೆ ಸುಮಾರಿಗೆ ವಾಪಸ್ಸಾದ ಪೋಷಕರು, ಮನೆ ಬಾಗಿಲು ಬಡಿದಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಬಾಗಿಲು ಹೊಡೆದು ಒಳ ಹೋದಾಗ ಮಗಳು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ. ಪರೀಕ್ಷೆ ಕಾರಣದಿಂದ ಮಗಳನ್ನು ಶಾಪಿಂಗ್'ಗೆ ಕರೆದೊಯ್ದಿರಲಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಮಾಡಿಸಿದೆ, ದೇಹವನ್ನು ತುಂಡಾಗಿಸುತ್ತಾರೆಂಬ ಭಯದಿಂದ ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಎಂದು ಪೋಷಕರು ಹೇಳಿದ್ದಾರೆ.
ಈ ನಡುವೆ ಕುದೂರು ಠಾಣೆಯ ಹೆಡ್‌ಕಾನ್ಸ್‌ಟೇಬಲ್ ನಾಗರಾಜು ಅವರಿಗೆ ಸಂಜೆ ವೇಳೆಗೆ ವಿಷಯ ತಿಳಿದುಬಂದಿದ್ದು, ಇದೀಗ ಪೋಷಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಈ ಸಂಬಂಧ ಬಿಎನ್‌ಎಸ್‌ನ ಸೆಕ್ಷನ್ 211 ರ ಅಡಿಯಲ್ಲಿ ಪೊಲೀಸರಿಗೆ ಮಾಹಿತಿ ನೀಡದಿದ್ದಕ್ಕಾಗಿ ದಂಪತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ
Advertisement