2024ರಲ್ಲಿ ಬೆಂಗಳೂರಿನಲ್ಲಿ ಮನೆ ಕಳ್ಳತನ ಪ್ರಕರಣ ಶೇ.20ರಷ್ಟು ಹೆಚ್ಚಳ: ಪೊಲೀಸರಿಗೆ ಸವಾಲು

ಈತ ಮನೆಯಿಂದ ಮನೆಗೆ ಕೆಲಸಕ್ಕೆ ಹೋಗಿ ಸ್ವಲ್ಪ ದಿನದಲ್ಲಿಯೇ ಕೆಲಸ ತೊರೆಯುತ್ತಿದ್ದ, ನಕಲಿ ಕೀ ಬಳಸಿ ಕದಿಯುವ ಕೆಲಸ ಮಾಡುತ್ತಿದ್ದ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ, ಆಭರಣ ವ್ಯಾಪಾರಿಯೊಬ್ಬರ ಮನೆಯಲ್ಲಿ ಮನೆಕೆಲಸಗಾರರಾಗಿ ಕೆಲಸ ಮಾಡುತ್ತಿದ್ದ ದಂಪತಿ ಮತ್ತು ಅವರ ಇಬ್ಬರು ಸಹಚರರು 15.15 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಆಭರಣಗಳನ್ನು ಕದ್ದು ಪರಾರಿಯಾಗಿದ್ದರು.

ಡಿಸೆಂಬರ್ ನಲ್ಲಿ ಮತ್ತೊಬ್ಬ ಕೆಲಸಗಾರ ತನ್ನ ಹಿಂದಿನ ಉದ್ಯೋಗದಾತರ ಮನೆಯಿಂದ 700 ಗ್ರಾಂ ಚಿನ್ನದ ಆಭರಣ ಕದ್ದು ಪರಾರಿಯಾಗಿದ್ದ. ಈತ ಮನೆಯಿಂದ ಮನೆಗೆ ಕೆಲಸಕ್ಕೆ ಹೋಗಿ ಸ್ವಲ್ಪ ಸಮಯದಲ್ಲಿಯೇ ಕೆಲಸ ತೊರೆಯುತ್ತಿದ್ದ, ನಕಲಿ ಕೀ ಬಳಸಿ ಕದಿಯುವ ಕೆಲಸ ಮಾಡುತ್ತಿದ್ದ.

ಕಳೆದ ವರ್ಷ 2024 ರಲ್ಲಿ ಬೆಂಗಳೂರಿನಲ್ಲಿ ನಡೆದ ಕೆಲವು ಕಳ್ಳತನ ಪ್ರಕರಣಗಳು ಇವು. ಇಂತಹ 383 ಪ್ರಕರಣಗಳು ವರದಿಯಾಗಿದ್ದು, 2023 ಕ್ಕೆ ಹೋಲಿಸಿದರೆ ಶೇಕಡಾ 20ರಷ್ಟು ಹೆಚ್ಚಳವಾಗಿದೆ. ಇವುಗಳಲ್ಲಿ, ಪೊಲೀಸರು 145 ಪ್ರಕರಣಗಳನ್ನು ಪರಿಹರಿಸಿದ್ದಾರೆ. 2023 ರಲ್ಲಿ 320 ಪ್ರಕರಣಗಳು ವರದಿಯಾಗಿದ್ದು, 174 ಪ್ರಕರಣಗಳನ್ನು ಪರಿಹರಿಸಲಾಗಿದೆ. ಈ ಕಳ್ಳತನಗಳಲ್ಲಿ ಹೆಚ್ಚಿನವು ವಲಸೆ ಕಾರ್ಮಿಕರನ್ನು ಒಳಗೊಂಡಿವೆ. ನಗರ ಪೊಲೀಸರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, 2024 ರಲ್ಲಿ ಮನೆಗೆಲಸಕ್ಕೆ ಬಂದವರು ಕದ್ದಿರುವ ವಸ್ತುಗಳ ಒಟ್ಟು ಮೌಲ್ಯ - ಆಭರಣ, ನಗದು, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳು - 46.5 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಪೊಲೀಸರು 9.8 ಕೋಟಿ ರೂಪಾಯಿಗಳ ಲೂಟಿ ಮಾಡಿದ್ದನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಉಪ ಪೊಲೀಸ್ ಆಯುಕ್ತ (ಕೇಂದ್ರ) ಶೇಖರ್ ಎಚ್ ತೆಕ್ಕಣ್ಣವರ್, ಮನೆ ಮಾಲೀಕರ ನಿರ್ಲಕ್ಷ್ಯದಿಂದ ಮನೆಗೆಲಸದವರು ಕಳ್ಳತನ ಮಾಡಲು ಸುಲಭವಾಗುತ್ತದೆ ಎಂದರು. ಮನೆ ಕೆಲಸಕ್ಕೆ ಸಹಾಯಕರನ್ನು ನೇಮಿಸಿಕೊಳ್ಳುವ ಮೊದಲು, ಮನೆ ಮಾಲೀಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತಮ್ಮ ರುಜುವಾತುಗಳನ್ನು ಪರಿಶೀಲಿಸಬೇಕು, ಮನೆ ಕೆಲಸಕ್ಕೆ ಬರುವವರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆಯೇ ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ. ಉದ್ಯೋಗದಾತರು ಗುರುತಿನ ಮೂಲ ಪುರಾವೆಗಳನ್ನು ಸಹ ಸಂಗ್ರಹಿಸಿ ಅವುಗಳನ್ನು ಪರಿಶೀಲಿಸಬೇಕು ಎಂದರು.

ಮನೆಮಾಲೀಕರು ತೆಗೆದುಕೊಳ್ಳಬಹುದಾದ ಮತ್ತೊಂದು ಹೆಜ್ಜೆಯೆಂದರೆ, ಸರಿಯಾದ ಹಿನ್ನೆಲೆ ಪರಿಶೀಲನೆಯನ್ನು ಖಚಿತಪಡಿಸಿಕೊಳ್ಳಲು ಅಧಿಕೃತ ಮಾನವ ಸಂಪನ್ಮೂಲ ಏಜೆನ್ಸಿಗಳ(HR agency) ಮೂಲಕ ಮನೆಕೆಲಸದವರನ್ನು ನೇಮಿಸಿಕೊಳ್ಳಬೇಕು ಎಂದರು.

ನಗರದಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಹೆಚ್ಚಿನ ಮನೆಕೆಲಸದವರು ಇತರ ರಾಜ್ಯಗಳಿಂದ ಬಂದವರು. ಅವರು ಮೊದಲು ತಮ್ಮ ಉದ್ಯೋಗದಾತರ ವಿಶ್ವಾಸವನ್ನು ಗಳಿಸುತ್ತಾರೆ, ಕೆಲವು ನೇಪಾಳಿಗಳು ನಿರ್ದಿಷ್ಟವಾಗಿ ದೊಡ್ಡ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಸಂಚು ರೂಪಿಸುತ್ತಾರೆ. ಮನೆಯವರ ವಿಶ್ವಾಸ ಗಳಿಸಿ ಮಾಲೀಕರನ್ನು ತಮ್ಮ ಸಂಬಂಧಿಕರನ್ನು ನೇಮಿಸಿಕೊಳ್ಳಲು ಸಹ ಶಿಫಾರಸು ಮಾಡುತ್ತಾರೆ. ಕಾಲಾನಂತರದಲ್ಲಿ, ಮನೆ ಮಾಲೀಕರು ಅವರನ್ನು ನಂಬಿ ಮನೆ ಕೀಲಿಕೈಯನ್ನು ಸಹ ಕೊಟ್ಟು ಹೋಗುತ್ತಾರೆ ಎನ್ನುತ್ತಾರೆ ಪೊಲೀಸರು.

ಅನೇಕ ಉದ್ಯೋಗದಾತರು ಕೆಲಸಕ್ಕೆ ಬಂದವರ ಬಗ್ಗೆ ಸರಿಯಾದ ದಾಖಲೆಗಳು ಅಥವಾ ಮಾಹಿತಿಯನ್ನು ನಿರ್ವಹಿಸುವಲ್ಲಿ ವಿಫಲರಾಗುತ್ತಾರೆ. ಮನೆಕೆಲಸದವರು ಸ್ಥಳೀಯರಾಗಿದ್ದರೆ ಪೊಲೀಸರಿಗೆ ಪತ್ತೆಹಚ್ಚುವುದು ಸುಲಭ. ಬೇರೆ ರಾಜ್ಯದವರಾಗಿದ್ದರೆ, ಮನೆ ಮಾಲೀಕರು ಒದಗಿಸಿದ ಸರಿಯಾದ ವಿವರಗಳ ಕೊರತೆಯಿಂದಾಗಿ ಅವರನ್ನು ಪತ್ತೆಹಚ್ಚುವುದು ಕಷ್ಟಕರವಾಗಿರುತ್ತದೆ.

Representational image
ಅಮ್ಮನ ಬದಲು ಕೆಲಸ ಮಾಡುತ್ತಿದ್ದ ಮಗನ ಬಂಧನ; ಲೋಕಾಯುಕ್ತ ದಾಳಿ ವೇಳೆ ಬಿಬಿಎಂಪಿ ಅಕ್ರಮ ಬಯಲು

ಮಾಹಿತಿ ಪಡೆಯುವಲ್ಲಿನ ವಿಳಂಬವು ಪತ್ತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಕೆಲವು ಸಂದರ್ಭಗಳಲ್ಲಿ, ಮಾಲೀಕರು ಹೆಚ್ಚಿನ ವೇತನವನ್ನು ಕೇಳಿದಾಗ ಕೆಲಸದವರನ್ನು ತೆಗೆದುಹಾಕಲು ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಪ್ರಕರಣಗಳೂ ಉಂಟು ಎನ್ನುತ್ತಾರೆ ಪೊಲೀಸರು.

ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸ್ ಅಧಿಕಾರಿಗಳು ರಾಜ್ಯದಿಂದ ಹೊರಗೆ ಪ್ರಯಾಣಿಸುವಾಗ ತಮ್ಮ ಸ್ವಂತ ಖರ್ಚು ಮಾಡಿಕೊಂಡು ಹೋಗಬೇಕಾಗಿರುವುದು ಹಲವು ಸಂದರ್ಭಗಳಲ್ಲಿ ಪ್ರಕರಣ ಬಗೆಹರಿಯದಿರಲು ಕಾರಣವಾಗುತ್ತದೆ ಎನ್ನುತ್ತಾರೆ ಪೊಲೀಸರು.

ನಗರದಲ್ಲಿ ಪ್ರಮುಖ ಕಳ್ಳತನ ಪ್ರಕರಣಗಳು

ಆಭರಣ ವ್ಯಾಪಾರಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳದ ದಂಪತಿ ಮತ್ತು ಅವರ ಇಬ್ಬರು ಸಹಚರರು ಸೇರಿ 8 ಕೆಜಿ ಚಿನ್ನ, 212 ಗ್ರಾಂ ವಜ್ರಾಭರಣ ಮತ್ತು 40 ಲಕ್ಷ ನಗದು ಕದ್ದಿದ್ದಾರೆ, ಒಟ್ಟು 15.15 ಕೋಟಿ ರೂ. ಮೌಲ್ಯದ್ದಾಗಿದೆ. ಕಳೆದ ವರ್ಷ ನವೆಂಬರ್ ಮೊದಲ ವಾರದಲ್ಲಿ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನ ನಡೆದಿತ್ತು

ಬೆಳ್ಳಂದೂರು ಪೊಲೀಸರು ತಮ್ಮ ಹಿಂದಿನ ಉದ್ಯೋಗದಾತರ ಮನೆಯಿಂದ 700 ಗ್ರಾಂ ಚಿನ್ನದ ಆಭರಣಗಳನ್ನು ಕದ್ದಿದ್ದಕ್ಕಾಗಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದನು. 2023 ರಲ್ಲಿ ಕೆಲಸ ಬಿಡುವ ಮೊದಲು ಮನೆಯ ನಕಲು ಕೀ ಮಾಡಿಕೊಂಡಿದ್ದನು. ಕಳೆದ ಡಿಸೆಂಬರ್ ನಲ್ಲಿ ಮನೆ ಮಾಲೀಕರು ಹೊರಗೆ ಹೋಗಿದ್ದ ವೇಳೆ ಹೊಂಚು ಹಾಕಿ 700 ಗ್ರಾಂ ಚಿನ್ನದ ಆಭರಣಗಳನ್ನು ಕದ್ದಿದ್ದನು.

ಅಕ್ಟೋಬರ್ 21ರಂದು ಜಯನಗರ 3ನೇ ಬ್ಲಾಕ್‌ನಲ್ಲಿರುವ ಸಂಪಿಗೆ ಥಿಯೇಟರ್ ಮಾಲೀಕರ ಮನೆಯಿಂದ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕದ್ದಿದ್ದಕ್ಕಾಗಿ ನೇಪಾಳದ ಮತ್ತೊಬ್ಬ ದಂಪತಿಯನ್ನು ಮೂವರು ಪುರುಷರೊಂದಿಗೆ ಜಯನಗರ ಪೊಲೀಸರು ಬಂಧಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com