
ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಆದಾಯ ಹೆಚ್ಚಿಸಲು ಆಯ್ಕೆಗಳನ್ನು ಅನ್ವೇಷಿಸುತ್ತಿದ್ದು, ನಾನ್ ಎಸಿ ಬಸ್‌ಗಳಲ್ಲಿ ಜಾಹೀರಾತು ಹಾಕಲು ಅವಕಾಶ ಕೊಡಲು ಯೋಜನೆ ರೂಪಿಸಿದೆ. 3000 ಬಸ್‌ಗಳಲ್ಲಿ ಸಂಪೂರ್ಣ ಸುತ್ತುವರಿದಂತೆ ಜಾಹೀರಾತು ಪ್ರದರ್ಶನಕ್ಕೆ ತಯಾರಿ ಮಾಡಿದೆ.
ಇಷ್ಟು ದಿನ ಬಸ್‌ಗಳ ಹಿಂಭಾಗದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇದೀಗ. ಬಸ್‌ಗಳಲ್ಲಿನ ಗಾಜುಗಳನ್ನು ಹೊರತುಪಡಿಸಿ ಮುಂದಿನ ಮತ್ತು ಹಿಂಭಾಗದ ಉಳಿದ ಎಲ್ಲ ಭಾಗದಲ್ಲೂ ಜಾಹೀರಾತು ಅಳವಡಿಸಲು ಅವಕಾಶ ನೀಡಲು ಮುಂದಾಗಿದೆ. ಇದಕ್ಕಾಗಿ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ ರೆಡ್ಡಿ ಅವರು ಮಾತನಾಡಿ, ನಿಗಮವು ಈ ರೀತಿಯ ನಿರ್ಧಾರ ಕೈಗೊಳ್ಳುತ್ತಿರುವುದು ಇದೇ ಮೊದಲಲ್ಲ. ಎಸಿ ಬಸ್‌ಗಳಲ್ಲಿ ಜಾಹೀರಾತು ಅಳವಡಿಸಲು ಅವಕಾಶ ನೀಡಲಾಗಿತ್ತು. ಇದೀಗ ಹವಾ ನಿಯಂತ್ರಿತವಲ್ಲದ ಬಸ್‌ಗಳಲ್ಲಿಯೂ ಅವಕಾಶ ನೀಡಲಾಗುತ್ತಿದೆ. ಮೂರು ಸಾವಿರ ನಾನ್ ಎಸಿ ಬಸ್ ಗಳಲ್ಲಿ ಜಾಹೀರಾತು ನೀಡಲು ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಬಿಎಂಟಿಸಿ ನಿಯಮಗಳ ಪ್ರಕಾರ ಬಸ್‌ನಲ್ಲಿ ಹಾಕಲಾಗುವ ಜಾಹೀರಾತುಗಳು 350 ಚದರ ಅಡಿಯಿರಬೇಕು, ಕಿಟಕಿ ಗಾಜು ಮತ್ತು ಪ್ರಯಾಣಿಕರ ಆಸನದ ಹಿಂಭಾಗವನ್ನು ಹೊರತುಪಡಿಸಿ, ಬಿಎಂಟಿಸಿ ಲೋಗೋ, ವಾಹನ ನೋಂದಣಿ ಸಂಖ್ಯೆ ಮತ್ತು ಬಸ್ ಡಿಪೋ ವಿವರಗಳಿಗೆ ಅಡ್ಡಿಯಾಗದಂತೆ ಬಸ್‌ಗಳಲ್ಲಿ ಜಾಹೀರಾತನ್ನು ಅಂಟಿಸಬೇಕು.
ಜಾಹೀರಾತಿಗೆ ಬಳಸುವ ಸ್ಟಿಕ್ಕರ್‌ಗಳು ಮತ್ತು ಇತರೆ ವಸ್ತುಗಳು ಪರಿಸರ ಸ್ನೇಹಿ ವಸ್ತುಗಳಿಂದ ಮಾಡಿರಬೇಕೆಂದು ತಿಳಿಸಲಾಗಿದೆ. ಇದಲ್ಲದೆ, ಎಲ್ಲಾ ಜಾಹೀರಾತುಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಪ್ರದರ್ಶಿಸಬೇಕೆಂದು ತಿಳಿಸಲಾಗಿದೆ.
ಸಾರಿಗೆ ನಿಗಮದ ಈ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಯಾಣಿಕರೊಬ್ಬರು, ಬಸ್‌ಗಳ ಹಿಂದಿನ ಪ್ಯಾನೆಲ್‌ನಲ್ಲಿ ಜಾಹೀರಾತುಗಳನ್ನು ಅನುಮತಿಸುವುದರಲ್ಲಿ ಸಮಸ್ಯೆಯಿಲ್ಲ. ಏಕೆಂದರೆ ಇದು ಬಸ್‌ನೊಳಗೆ ಪ್ರಯಾಣಿಸುವ ಜನರ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ಬಸ್‌ಗಳ ಮೇಲೆ ಸಂಪೂರ್ಣವಾಗಿ ಹಾಕಿದರೆ, ಬಸ್ ಎಲ್ಲಿಗೆ ಹೋಗುತ್ತಿದೆ? ಗಮ್ಯಸ್ಥಾನ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ
Advertisement