
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ನಟ ದರ್ಶನ್ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಅಧಿಕಾರಿಗಳಿಗೆ ಸಂಕಷ್ಟ ಶುರುವಾಗಿದೆ.
ನಟನಿಗೆ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಖೆ ನಡೆಸುತ್ತಿರುವ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಜೈಲು ಅಧಿಕಾರಿಗಳು ಭಾಗಿಯಾಗಿರುವುದನ್ನು ದೃಢಪಡಿಸಿದೆ.
ದರ್ಶನ್, ರೌಡಿಶೀಟರ್ ನಾಗ ಮತ್ತು ಇತರ ಕೈದಿಗಳಿಗೆ ಮೊಬೈಲ್ ಫೋನ್, ಸಿಗರೇಟ್ ಮತ್ತು ಇತರ ವಸ್ತುಗಳನ್ನು ನೀಡಲಾಗಿದ್ದು, ಇದರಲ್ಲಿ 13 ಜೈಲು ಅಧಿಕಾರಿಗಳು ಭಾಗಿಯಾಗಿದ್ದಾರೆಂದು ತಿಳಿಸಿದೆ.
ಈಗಾಗಲೇ ಈ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಕೆಲವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಚಿಂತನೆಗಳೂ ನಡೆಯುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ, ಜೈಲಿನ ಇಬ್ಬರು ಅಧೀಕ್ಷಕರು ಮತ್ತು ಆರು ಸಹಾಯಕ ಸೂಪರಿಂಟೆಂಡೆಂಟ್‌ಗಳು ಸೇರಿದಂತೆ 13 ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಪೊಲೀಸರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆಂದು ತಿಳಿದುಬಂದಿದೆ. ಪ್ರಾಸಿಕ್ಯೂಷನ್'ಗೆ ಅನುಮತಿ ದೊರೆತ ಕೂಡಲೇ ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಈಗಾಗಲೇ ಪ್ರಾಸಿಕ್ಯೂಷನ್ ಮಂಜೂರಾತಿ ನೀಡಲಾಗಿದೆ ಎಂದು ಮೂಲವೊಂದು ತಿಳಿಸಿದೆ, ಯಾವುದೇ ಅಧಿಕೃತ ಮೂಲಗಳು ಅದನ್ನು ಖಚಿತಪಡಿಸಿಲ್ಲ.
ನಟ ದರ್ಶನ್ ಅವರು ರೌಡಿಶೀಟರ್ ನಾಗ ಸೇರಿದಂತೆ ಇತರರ ಜೊತೆಗೆ ಕುಳಿತು ಸಿಗರೇಟ ಸೇದುತ್ತಿದ್ದ ಫೋಟೋ ಹಾಗೂ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ವಿಡಿಯೋ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ 3 ಎಫ್ಐಆರ್ ದಾಖಲಾಗಿತ್ತು. ಅಲ್ಲದೆ. ಕಾರಾಗೃಹದ ಮುಖ್ಯ ಅಧೀಕ್ಷಕ ಸೇರಿದಂತೆ ಒಂಬತ್ತು ಸಿಬ್ಬಂದಿಯನ್ನು ಕಾರಾಗೃಹ ಇಲಾಖೆ ಅಮಾನತುಗೊಳಿಸಿತ್ತು. ನಂತರ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಹಾಗೂ ಸಹಚರರನ್ನು ಇತರೆ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿತ್ತು.
Advertisement