
ಬೆಂಗಳೂರು: ನಾಮಫಲಕದಲ್ಲಿ ಶೇ.60ರಷ್ಟು ಕನ್ನಡಕ್ಕೆ ಆದ್ಯತೆ ನೀಡದ ಅಂಗಡಿಗಳ ಪರವಾನಿಗೆ ನವೀಕರಿಸದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ (ಕೆಡಿಎ) ಸೂಚನೆ ನೀಡಿದೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಕನ್ನಡ ಭಾಷೆ ಅನುಷ್ಠಾನದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಕೆಡಿಎ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು, ಕನ್ನಡ ಭಾಷಾ ಅಭಿವೃದ್ಧಿ ಕಾಯ್ದೆಯಡಿ ನಾಮಫಲಕದಲ್ಲಿ ಶೇ.60 ರಷ್ಟು ಜಾಗವನ್ನು ಕನ್ನಡ ಭಾಷೆಗೆ ಮೀಸಲಿಡಬೇಕು. ಈ ನಿಯಮ ಪಾಲಿಸದವರನ್ನು ಗಂಭೀರವಾಗಿ ಪರಿಗಣಿಸಿ, ಪರವಾನಗಿ ನವೀಕರಣ ಮಾಡಬಾರದು ಎಂದು ಸೂಚನೆ ನೀಡಿದರು.
ಗ್ರೇಟರ್ ಬೆಂಗಳೂರು ಯೋಜನೆಯಡಿಯಲ್ಲಿ ಮುಂದಿನ ದಿನಗಳಲ್ಲಿ ಹತ್ತಾರು ಪಾಲಿಕೆಗಳು ಸೃಜನೆಯಾಗುವ ಸಾಧ್ಯತೆಗಳು ದಟ್ಟವಾಗಿದ್ದು, ಅಂದು ಎದುರಾಗಬಹುದಾದ ಕನ್ನಡದ ಸವಾಲುಗಳನ್ನು ಈಗಲೇ ಪಾಲಿಕೆ ಅಂದಾಜು ಮಾಡಬೇಕಿದೆ. ಈ ಪಾಲಿಕೆಗಳಿಗೆ ಮಹಾಪೌರರ ಆಯ್ಕೆ ಸಂದರ್ಭದಲ್ಲಿ ಮೂಲ ಕನ್ನಡಿಗರಿಗೆ ಮಾತ್ರ ಅವಕಾಶವಿರುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು.
ಕೆಡಿಎ ಈಗಾಗಲೇ ನಗರದಾದ್ಯಂತ 19 ಸ್ಥಳಗಳಲ್ಲಿ ಕನ್ನಡೇತರರಿಗೆ ಕನ್ನಡ ತರಗತಿಗಳನ್ನು ನಡೆಸುತ್ತಿದೆ. ಇದರ ಫಲಿತಾಂಶ ಆಶಾದಾಯಕವಾಗಿದೆ. ಕನ್ನಡೇತರರು ಇರುವ ಪ್ರದೇಶಗಳಲ್ಲಿ ಕನ್ನಡ ಕಲಿಕಾ ಕೇಂದ್ರಗಳ ಸಂಖ್ಯೆಯ ಹೆಚ್ಚಳಕ್ಕೆ ಬಿಬಿಎಂಪಿ ಮುಂದಾಗಬೇಕು. ಪ್ರಾಧಿಕಾರ ಈ ಕುರಿತಂತೆ ವಿಶೇಷ ಪಠ್ಯಕ್ರಮ ಸಿದ್ಧಪಡಿಸಿದ್ದು, ಬಿಬಿಎಂಪಿ ಅದನ್ನು ಅಳವಡಿಸಿಕೊಳ್ಳಬಹುದಾಗಿದೆ.
ಬಿಬಿಎಂಪಿ ಗುರುತಿಸುವ ಕನ್ನಡ ಶಿಕ್ಷಕರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತರಬೇತಿಯನ್ನು ನೀಡಲು ಸಿದ್ಧವಿದೆ. ಬೆಂಗಳೂರಿನ ಬಹುಭಾಶಾ ಪರಿಸರವನ್ನು ಉಳಿಸಿಕೊಂಡೇ ಕನ್ನಡವನ್ನು ಮುನ್ನೆಲೆಗೆ ತರಬೇಕಾದ ಅವಶ್ಯಕತೆ ಇದೆ. ಬಿಬಿಎಂಪಿ ವ್ಯಾಪ್ತಿಯ ಸರಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗೆ ಕೂಡಲೇ ಪಾಲಿಕೆ ಮುಂದಾಗಬೇಕು. ಸರಕಾರಿ ಕನ್ನಡ ಶಾಲೆಗಳು ಉಳಿದಲ್ಲಿ ಮಾತ್ರ ಕನ್ನಡ ಉಳಿಯುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಹಿರಿಯ ಅಧಿಕಾರಿಗಳು ಕನ್ನಡದಲ್ಲಿ ಟಿಪ್ಪಣಿಯನ್ನು ಮಂಡಿಸುತ್ತಿಲ್ಲವೆಂಬ ದೂರುಗಳು ಪ್ರಾಧಿಕಾರಕ್ಕೆ ಸ್ವೀಕೃತವಾಗಿದ್ದು, ಈ ಬಗ್ಗೆ ಮುಖ್ಯ ಆಯುಕ್ತರು ಕೂಡಲೇ ಅಗತ್ಯ ನಿರ್ದೇಶನ ಹೊರಡಿಸಬೇಕೆಂದು ಸೂಚಿಸಿದರು.
ವಿಧಾನಸೌಧ ಪುಸ್ತಕ ಮೇಳ ಲೋಗೋ ವಿನ್ಯಾಸಕ್ಕೆ ಆಹ್ವಾನ
ಫೆಬ್ರವರಿ 28 ರಿಂದ ಮಾರ್ಚ್ 3 ರವರೆಗೆ ವಿಧಾನಸೌಧದ ಆವರಣದಲ್ಲಿ ಕರ್ನಾಟಕ ವಿಧಾನಸಭೆ ಆಯೋಜಿಸಿರುವ ನಾಲ್ಕು ದಿನಗಳ ಪುಸ್ತಕ ಮೇಳಕ್ಕೆ ಲೋಗೋವನ್ನು ವಿನ್ಯಾಸಗೊಳಿಸಲು ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ.
ಆಸಕ್ತರು ತಮ್ಮ ಲೋಗೋ ವಿನ್ಯಾಸಗಳನ್ನು ಸಲ್ಲಿಸಬಹುದು. ಫೆಬ್ರವರಿ 3 ರೊಳಗೆ ಅವರ ಅಂಚೆ ವಿಳಾಸಗಳು, ಫೋನ್ ನಂಬರ್ ಮತ್ತು ಇತರ ವಿವರಗಳೊಂದಿಗೆ ಸಲ್ಲಿಸಬೇಕು. ಈ ವವಿನ್ಯಾಸವನ್ನು ಅಧಿಕಾರಿಗಳು ಪರಿಶೀಲಿಸಿ, ಅಂತಿಮಗೊಳಿಸಿ, ವಿಜೇತರಿಗೆ ಬಹುಮಾನ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಕರ್ನಾಟಕ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ನಾಡದೇವಿ ಭುವನೇಶ್ವರಿಯ 25 ಅಡಿ ಕಂಚಿನ ಪ್ರತಿಮೆಯನ್ನು ಸಿಎಂ ಸಿದ್ದರಾಮಯ್ಯ ಸೋಮವಾರ ಸಂಜೆ 4:30ಕ್ಕೆ ಅನಾವರಣಗೊಳಿಸಲಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್ ತಂಗಡಗಿ ಅವರುಸ ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ‘ಹೆಸರಾಯ್ತು ಕರ್ನಾಟಕ, ಹೆಸರಾಗಲಿ ಕನ್ನಡ’ ಎಂಬ ಶೀರ್ಷಿಕೆಯಡಿ ವರ್ಷವಿಡೀ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
Advertisement