
ಬೆಂಗಳೂರು: ಮುಂಬರುವ ಬೇಸಿಗೆಯಲ್ಲಿ ಅಂತರ್ಜಲದ ಮೇಲೆ ಹೆಚ್ಚು ಅವಲಂಬಿತವಾಗಿರುವ ಆಗ್ನೇಯ ಬೆಂಗಳೂರು, ವೈಟ್‌ಫೀಲ್ಡ್ ಮತ್ತು ನಗರದ ಹೊರವಲಯದಲ್ಲಿ ಅತಿ ಹೆಚ್ಚು ನೀರಿನ ಕೊರತೆ ಎದುರಿಸುವ ಸಾಧ್ಯತೆಯಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಶನಿವಾರ ಹೇಳಿದ್ದಾರೆ.
ನಗರದಲ್ಲಿನ ಸಂಭಾವ್ಯ ನೀರಿನ ಕೊರತೆಯನ್ನು ನಿರ್ಣಯಿಸಲು ಬಿಡಬ್ಲ್ಯೂಎಸ್‌ಬಿಬಿ ಇತ್ತೀಚೆಗೆ ನಡೆಸಿದ ವೈಜ್ಞಾನಿಕ ಅಧ್ಯಯನದ ವರದಿಯು, ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳು ಸೇರಿದಂತೆ ಬೆಂಗಳೂರಿನ 80 ವಾರ್ಡ್‌ಗಳನ್ನು ಹೆಚ್ಚು ಅಂತರ್ಜಲ ಅವಲಂಬಿತ ಹಾಗೂ ಅತಿ ಹೆಚ್ಚು ನೀರಿನ ಕೊರತೆಯನ್ನು ಎದುರಿಸಬಹುದಾದ ವಾರ್ಡ್‌ಗಳಾಗಿ ಗುರುತಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿವಾಸಿಗಳು, ವಿಶೇಷವಾಗಿ ಹೆಚ್ಚಿನ ಅಪಾಯದ ವಾರ್ಡ್‌ಗಳಲ್ಲಿರುವವರು, ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಕಾವೇರಿ ನೀರಿನ ಸಂಪರ್ಕ ಪಡೆಯುವಂತೆ ಒತ್ತಾಯಿಸುತ್ತೇವೆ. ಕಾವೇರಿ ಹಂತ 5 ಯೋಜನೆಯು ನೀರಿನ ಲಭ್ಯತೆಯನ್ನು ಹೆಚ್ಚಿಸಿದೆ ಎಂದು ಮನೋಹರ್ ಹೇಳಿದ್ದಾರೆ.
ದೇಶದಲ್ಲೇ ಮೊದಲ ಬಾರಿಗೆ ನಗರವೊಂದಕ್ಕೆ ಇಂತಹ ವೈಜ್ಞಾನಿಕ ಅಧ್ಯಯನ ನಡೆಸಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ಸಹಯೋಗದೊಂದಿಗೆ ಅಧ್ಯಯನ ಮಾಡಲಾಗಿದೆ ಎಂದು ಮನೋಹರ್ ತಿಳಿಸಿದ್ದಾರೆ.
"ಬೆಂಗಳೂರಿನಲ್ಲಿ ಸಮರ್ಪಕ ನೀರಿನ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವ ನಮ್ಮ ಪ್ರಯತ್ನಗಳಲ್ಲಿ ಈ ಅಧ್ಯಯನವು ಒಂದು ಪ್ರಮುಖ ಮೈಲಿಗಲ್ಲು. ವೈಜ್ಞಾನಿಕ ಒಳನೋಟಗಳನ್ನು ಬಳಸಿಕೊಳ್ಳುವ ಮೂಲಕ, ಸವಾಲುಗಳನ್ನು ಎದುರಿಸಲು ಮತ್ತು ನಗರದ ನೀರಿನ ಅಗತ್ಯಗಳನ್ನು ಪೂರೈಸಲು ಪರಿಣಾಮಕಾರಿ ಪರಿಹಾರಗಳೊಂದಿಗೆ ನಾವು ಸಜ್ಜಾಗಿದ್ದೇವೆ" ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಅಂತರ್ಜಲದ ಮೇಲೆ ದಿನದಿಂದ ದಿನಕ್ಕೆ ಅವಲಂಬನೆ ಹೆಚ್ಚಾಗುತ್ತಿದೆ. ಪ್ರತಿನಿತ್ಯ ಸುಮಾರು 800 ಎಂಎಲ್‌ಡಿಯಷ್ಟು ನೀರನ್ನು ಕೊಳವೆ ಬಾವಿಗಳಿಂದ ತಗೆಯಲಾಗುತ್ತಿದೆ. ನಗರದ 110 ಹಳ್ಳಿಗಳು, ಸೌತ್ ಈಸ್ಟ್ ಹಾಗೂ ವೈಟ್‌ಫೀಲ್ಡ್ ಕಡೆಗಳಲ್ಲಿ ಕೊಳವೆ ಬಾವಿಗಳ ಮೇಲೆ ಹೆಚ್ಚು ಅವಲಂಬಿತರಾಗಿರುವುದನ್ನು ಅಧ್ಯಯನ ಉಲ್ಲೇಖಿಸಿದೆ ಎಂದಿದ್ದಾರೆ.
Advertisement