ಹೊನ್ನಾವರ ಗರ್ಭಿಣಿ ಹಸು ಹತ್ಯೆ ಪ್ರಕರಣ: ತನಿಖೆ ತೀವ್ರ, ಮೂವರು ಆರೋಪಿಗಳ ಬಂಧನ
ಹೊನ್ನಾವರ (ಉತ್ತರ ಕನ್ನಡ): ಹೊನ್ನಾವರ ನಡೆದಿದ್ದ ಗರ್ಭಿಣಿ ಹಸುವಿನ ಬರ್ಬರ ಹತ್ಯೆ ಪ್ರಕರಣದ ತನಿಖೆಯ ಭಾಗವಾಗಿ ಜಿಲ್ಲಾ ಪೊಲೀಸರು ಈ ಹಿಂದೆ ಜಾನುವಾರು ಕಳ್ಳತನ ಮತ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿಗಳನ್ನು ಅಲ್ತಾಫ್ ಕಾಟಪುರುಸು, ಮತಿನ್ ಕಾಟಪುರುಸು, ಮಹಮ್ಮದ್ ಹುಸೇನ್ ಖುರ್ವೆ ಎಂದು ಗುರ್ತಿಸಲಾಗಿದೆ. ಮೂವರ ವಿರುದ್ಧ ಜಾನುವಾರು ಕಳ್ಳತನ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, ವಶಕ್ಕೆ ಪಡೆದಿದ್ದಾರೆ.
ಮೂವರು ಆರೋಪಿಗಳು ಸಾಲಕೋಡು, ಕೊಂಡಕುಳಿ, ಹೊಸಕುಳಿ, ಕವಲಕ್ಕಿ ಗ್ರಾಮಗಳಲ್ಲಿ ಜಾನುವಾರು ಕಳ್ಳತನ, ಕಳ್ಳಸಾಗಣೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ.
ಈ ನಡುವೆ ಗರ್ಭಿಣಿ ಹಸು ಹತ್ಯೆ ಪ್ರಕರಣದ ತನಿಖೆಯನ್ನು ಮುಂದುವರೆಸಿರುವ ಮಾಂಸ ಮಾರಾಟಗಾರರೊಂದಿಗೆ ನಿನ್ನ ಸಭೆ ನಡೆಸಿದರು. ಗೋಹತ್ಯೆ, ಗೋವುಗಳ ಕಳ್ಳಸಾಗಣೆ ಮಾಡದಂತೆ ಎಚ್ಚರಿಕೆ ನೀಡಿದರು.
ಹೊನ್ನಾವರ ತಾಲೂಕಿನ ಸಾಲಕೋಡಿನ ಕೊಂಡಾಕುಳಿಯಲ್ಲಿ ಬೆಟ್ಟಕ್ಕೆ ಮೇಯಲು ಶನಿವಾರ (ಜ.18) ಹೋಗಿದ್ದ ಗರ್ಭಿಣಿ ಹಸುವಿನ ಕಾಲು, ರುಂಡ ಕಡಿದು, ಗರ್ಭದಲ್ಲಿ ಬೆಳೆಯುತ್ತಿದ್ದ ಕರುವಿನ ಭ್ರೂಣ ತೆಗೆದು ಹತ್ಯೆ ಮಾಡಲಾಗಿತ್ತು.
ಕೊಂಡಾಕುಳಿಯ ಕೃಷ್ಣ ಆಚಾರಿ ಎಂಬವರಿಗೆ ಸೇರಿದ್ದ ಹಸು ಭೀಕರವಾಗಿ ಹತ್ಯೆಯಾಗಿತ್ತು. ಈ ಘಟನೆ ವಿರುದ್ಧ ರಾಜ್ಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಹೊನ್ನಾವರ ಪಿಎಸ್‌ಐ ಮಂಜುನಾಥ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಪ್ರತಿದಿನ ಮೇಯಲು ಹೋಗುವ ಆಕಳು ಸಂಜೆ ಐದು ಗಂಟೆಗೆ ಕೊಟ್ಟಿಗೆಗೆ ಮರಳುತ್ತಿತ್ತು. ಶನಿವಾರ ಸಂಜೆಯಾದರೂ ಬರಲಿಲ್ಲ. ಹುಡುಕಲು ಹೋದರೂ ಸಿಗದೆ ಮನೆಗೆ ಮರಳಿದೆ. ಬೆಳಗ್ಗೆ ಮತ್ತೆ ಹುಡುಕಲು ಹೋದಾಗ ಬೆಟ್ಟದಲ್ಲಿ ಆಕಳು ರುಂಡ ಬಿದ್ದಿರುವುದು, ಆ ಕಡೆ ಈ ಕಡೆ ನೋಡಿದಾಗ ಅದರ ಕಾಲುಗಳ ಪಾದಗಳನ್ನು ಕತ್ತರಿಸಿ ಬಿಸಾಡಿರುವುದು ಕಂಡು ಬಂದಿದೆ. ದೇಹದ ಭಾಗ-ಮಾಂಸ ಮಾತ್ರ ಒಯ್ದಿದ್ದಾರೆ. ಆಕಳು ಐದಾರು ತಿಂಗಳ ಗರ್ಭಿಣಿ ಇರಬಹದು. ಅದರ ಹೊಟ್ಟೆಯೊಳಗಿರುವ ಕರುವಿನ ಭ್ರೂಣ ಹೊರತೆಗೆದು ಸೀಳಿ ಹತ್ಯೆ ಮಾಡಿ ಬಿಸಾಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಗೃಹಸಚಿವ ಡಾ.ಜಿ.ಪರಮೇಶ್ವರ್, ರಾಜ್ಯ ಗೃಹ ಇಲಾಖೆ ಐಜಿಪಿ ಹಾಗೂ ಉತ್ತರ ಕನ್ನಡ ಎಸ್ಪಿ ಜತೆ ಪ್ರತ್ಯೇಕ ಸಭೆ ನಡೆಸಿದ್ದರು. ಗೋ ಹತ್ಯೆಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ. ಹಂತಕರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದರು.