ಭದ್ರಾ ಮೇಲ್ದಂಡೆ ಯೋಜನೆ: ಬಜೆಟ್ ನಲ್ಲಿ ಘೋಷಿಸಿದಂತೆ 5,300 ಕೋಟಿ ರೂ ಬಿಡುಗಡೆ ಮಾಡಿ; ಕೇಂದ್ರ ಸರ್ಕಾರಕ್ಕೆ ಸಿಎಂ ಪತ್ರ

2023-24ನೇ ಸಾಲಿನ ಕೇಂದ್ರದ ಬಜೆಟ್‌ನಲ್ಲಿ 5,300 ಕೋಟಿ ರು. ಅನುದಾನದ ಜತೆಗೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದಾಗಿ ತಿಳಿಸಲಾಗಿತ್ತು.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದ 5,300 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಅವರು, 2023-24ನೇ ಸಾಲಿನ ಕೇಂದ್ರದ ಬಜೆಟ್‌ನಲ್ಲಿ 5,300 ಕೋಟಿ ರು. ಅನುದಾನದ ಜತೆಗೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದಾಗಿ ತಿಳಿಸಲಾಗಿತ್ತು. ಆದರೆ, ಮೂರು ವರ್ಷವಾದರೂ ಅನುದಾನ ಬಿಡುಗಡೆ ಮಾಡಲಾಗಿಲ್ಲ. ಈ ವರ್ಷವಾದರೂ ಬಿಡುಗಡೆ ಮಾಡುವಂತೆ ಹಣಕಾಸು ಮತ್ತು ಜಲಶಕ್ತಿ ಸಚಿವಾಲಯಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳ ಸುಮಾರು 2.25 ಲಕ್ಷ ಹೆಕ್ಟೇರ್ ಭೂ ಪ್ರದೇಶಕ್ಕೆ ಹನಿ ನೀರಾವರಿ ಒದಗಿಸಲಿದೆ. ಜೊತೆಗೆ 367 ಕೆರೆಗಳಿಗೆ ನೀರು ತುಂಬಿಸಲಿದೆ. 2008ರಲ್ಲಿ ಈ ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈವರೆಗೆ 10,121.75 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಡಿ.24, 2020ರಂದು ಭದ್ರಾ ಮೇಲ್ದಂಡೆ ಯೋಜನೆಯ ತಾಂತ್ರಿಕ ಆರ್ಥಿಕ ಕಾರ್ಯಸಾಧುವನ್ನು ಜಲಶಕ್ತಿ ಸಚಿವಾಲಯದ ಸಲಹಾ ಸಮಿತಿ ಅನುಮೋದಿಸಿದೆ. 2021 ಮಾರ್ಚ್​​​ನಲ್ಲಿ 15ನೇ ಬಂಡವಾಳ ಮಂಜೂರಾತಿ ಸಮಿತಿ 16,125 ಕೋಟಿ ರೂ. ಮೊತ್ತದ ಹೂಡಿಕೆಗೆ ಅನುಮೋದನೆ ನೀಡಿದೆ. ಜೊತೆಗೆ, ಉನ್ನತ ಮಟ್ಟದ ಸಂಚಲನಾ ಸಮಿತಿ ಈಗಾಗಲೇ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಶಿಫಾರಸು ಮಾಡಿದೆ. 2023-24ರ ಕೇಂದ್ರ ಬಜೆಟ್ ಭಾಷಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೇಂದ್ರ ಆರ್ಥಿಕ ನೆರವು ನೀಡುವ ಘೋಷಣೆ ಮಾಡಿತ್ತು. ಆದರೆ, ಈಗಾಗಲೇ ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡುವುದು ವಿಳಂಬವಾಗಿದೆ. ಕೇಂದ್ರ ಆರ್ಥಿಕ ನೆರವನ್ನು ಬಿಡುಗಡೆ ಮಾಡದೇ ಇರುವ ಕಾರಣ ಯೋಜನೆಯ ಪ್ರಗತಿ ಕುಂಠಿತವಾಗಿದೆ. ಯೋಜನೆಯ ಕಾಮಗಾರಿ ಪ್ರಗತಿ ತ್ವರಿತಕ್ಕಾಗಿ 5,300 ಕೋಟಿ ರೂ. ಕೇಂದ್ರದ ನೆರವನ್ನು ಬಿಡುಗಡೆ ಮಾಡುವುದು ಅಗತ್ಯವಾಗಿದೆ ಎಂದು ಮನವಿ ಮಾಡಿದ್ದಾರೆ.

CM Siddaramaiah
ಭದ್ರಾ ಮೇಲ್ದಂಡೆ ಯೋಜನೆ: ಕಾಲುವೆ ಕಾಮಗಾರಿಗೆ 51.32 ಹೆಕ್ಟೇರ್ ಅರಣ್ಯ ಪ್ರದೇಶ ಬಳಕೆಗೆ ಕೇಂದ್ರದ ಅನುಮೋದನೆ!

ಹಲವು ವರ್ಷ ಮಳೆಯ ಕೊರತೆಯಿಂದಾಗಿ ಕರ್ನಾಟಕದ ರೈತರು ನೀರಿನ ಅಭಾವ ಎದುರಿಸುತ್ತಿದ್ದಾರೆ. ರೈತರ ಹಿತಾಸಕ್ತಿಯನ್ನು ಕಾಪಾಡಲು ಮೇಲಿನ ಭದ್ರಾ ಯೋಜನೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕಿದೆ. ಹಾಗಾಗಿ, ಮುಂಬರುವ 2025–26ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ದೊರಕಿಸಬೇಕು. ಹಣಕಾಸು ಸಚಿವಾಲಯ ಮತ್ತು ಜಲಶಕ್ತಿ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು. ಬರಪೀಡಿತ ಜಿಲ್ಲೆಗಳ ರೈತರು ಮತ್ತು ಜನರಿಗೆ ನೆರವಾಗಬೇಕು ಎಂದು ವಿನಂತಿಸಿದ್ದಾರೆ.

ಪತ್ರದ ಪ್ರತಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಜಲಶಕ್ತಿ ಸಚಿವರಾದ ಸಿ.ಆರ್‌. ಪಾಟೀಲ್‌, ವಿ. ಸೋಮಣ್ಣ ಅವರಿಗೂ ಕಳುಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com