
ಬೆಂಗಳೂರು: ಹೈಕೋರ್ಟ್ ಆದೇಶದ ಹೊರತಾಗಿಯೂ ವರ್ಗಾವಣೆ ರದ್ದುಪಡಿಸಿ, ಮರುನಿಯೋಜನೆಗೊಳಿಸದೆ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ 14 ಮಂದಿ ಸಬ್ ರಿಜಿಸ್ಟ್ರಾರ್‌ಗಳು ಸಂಕಷ್ಟ ಎದುರಿಸುವಂತಾಗಿದೆ.
ಬೆಂಗಳೂರಿನ 10 ಮತ್ತು ಮಂಗಳೂರಿನ ಒಂದು ಉಪನೋಂದಣಿ ಕಚೇರಿಗಳಿಗೆ ಕರ್ತವ್ಯಕ್ಕೆ ತೆರಳುತ್ತಿರುವ ನೌಕರರು, ಸಿಸ್ಟಮ್ ಗಳಿಗೆ ಲಾಗಿನ್ ಆಗಲು ಸಾಧ್ಯವಾಗದೆ, ಸಂಜೆವರೆಗೂ ಕಚೇರಿಯಲ್ಲೇ ಇದ್ದು, ಯಾವುದೇ ಕೆಲಸ ಮಾಡದೆ ಮನೆಗೆ ಹಿಂತಿರುಗುತ್ತಿದ್ದಾರೆ. ಕಳೆದ ಮೂರು ವಾರಗಳಿಂದ ಇದೇ ರೀತಿಯ ಪರಿಸ್ಥಿತಿ ಇದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಕೆಂಗೇರಿ, ಗಾಂಧಿ ನಗರ, ಇಂದಿರಾನಗರ, ಬನಶಂಕರಿ, ಶ್ರೀರಾಂಪುರ, ಬ್ಯಾಟರಾಯನಪುರ, ಶ್ರೀರಾಂಪುರ, ಜಿಗಣೆ, ದೇವನಹಳ್ಳಿ, ಬಸವನಗುಡಿ ಹಾಗೂ ಮಂಗಳೂರಿನಲ್ಲಿರುವ ಕಚೇರಿಗಳಲ್ಲಿ ಈ ಪರಿಸ್ಥಿತಿ ಎದುರಾಗಿದೆ ಎಂದು ತಿಳಿದುಬಂದಿದೆ.
ಕಂದಾಯ ಭವನದಲ್ಲಿರುವ ಕೇಂದ್ರ ಕಚೇರಿಗೆ ಭೇಟಿ ಪದೇ ಪದೇ ಮರು ಸೇರ್ಪಡೆಗೆ ಮನವಿ ಮಾಡುತ್ತಲೇ ಇದ್ದೇವೆ. ಹೊಸದಾಗಿ ನೇಮಕಗೊಂಡಿರುವವರು ಹಾಗೂ ನಾವು ಇಬ್ಬರೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇವೆ. ಒಂದೊಂದು ಹುದ್ದೆಗೂ ಇಬ್ಬರು ಸಬ್ ರಿಜಿಸ್ಟ್ರಾರ್ ಗಳು ಕರ್ತವ್ಯಕ್ಕೆ ಹಾಜರಾಗುತ್ತಿದ್ದೇವೆ. ಈ ಪೈಕಿ ಒಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ವರ್ಗಾವಣೆಗೊಂಡವರು ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಸಾರ್ವಜನಿಕ ಕೆಲಸಗಳ ಮೇಲೆ ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂದು ನೌಕರರೊಬ್ಬರು ಹೇಳಿದ್ದಾರೆ.
ಇತರೆ ಜಿಲ್ಲೆಗಳಲ್ಲಿ ದ್ವಿತೀಯ ದರ್ಜೆಯ ಸಹಾಯಕ ಮತ್ತು ಪ್ರಥಮ ದರ್ಜೆಯ ಸಹಾಯಕರಂತಹ ಕ್ಲರಿಕಲ್ ಸಿಬ್ಬಂದಿ ಸಬ್‌ರಿಜಿಸ್ಟ್ರಾರ್‌ನ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆಂದು ಮೂಲಗಳು ವಿವರಿಸಿವೆ.
ಸಬ್ ರಿಜಿಸ್ಟ್ರಾರ್ ಒಬ್ಬರು ಮಾತನಾಡಿ, ಇಲಾಖೆಯು ಹೈಕೋರ್ಟ್ ಆದೇಶಗಳನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಿದೆ. ಡಿಸೆಂಬರ್ 10, 2024 ರಂದು ಬೆಂಗಳೂರಿನಿಂದ ಇಪ್ಪತ್ನಾಲ್ಕು ಮಂದಿಯನ್ನು ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾಯಿಸಲಾಗಿತ್ತು. ನಿಯೋಜನೆಗೊಂಡ 24 ಮಂದಿಯಲ್ಲಿ ಹತ್ತು ಮಂದಿ ಇತರೆ ಜಿಲ್ಲೆಗಳಗೆ ತೆರಳಿ ಕರ್ತವ್ಯಕ್ಕೆ ಹಾಜರಾದರು. ಉಳಿದ 13 ಜನರು ವರ್ಗಾವಣೆಗೊಳ್ಳಲು ಸಾಧ್ಯವಾಗಲಿಲ್ಲ. ನಮ್ಮ ಕುಟುಂಬಗಳಿಗೆ ಹಲವಾರು ವ್ಯವಸ್ಥೆಗಳನ್ನು ಮಾಡಬೇಕಾಗಿರುವುದರಿಂದ ಹಠಾತ್ತನೆ ಸ್ಥಳಾಂತರಗೊಳ್ಳುವುದು ಕಷ್ಟಕರವಾಗಿತ್ತು. ಬಳಿಕ ವರ್ಗಾವಣೆ ರದ್ದು ಕೋರಿ ಹೈಕೋರ್ಟ್ ಮೊರೆ ಹೋದೆವು. ಬಳಿಕ ನ್ಯಾಯಾಲಯ ವರ್ಗಾವಣೆಗೆ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನಿಂದ ವರ್ಗಾವಣೆಗೊಂಡವರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಡಿಸೆಂಬರ್ 16ರಂದು ನ್ಯಾಯಾಲಯ ಆದೇಶಿಸಿತ್ತು. ಆದರೆ, ಇಲಾಖೆ ಹಾಗೆ ಮಾಡಿಲ್ಲ. ಜೇವರ್ಗಿ, ಚನ್ನರಾಯಪಟ್ಟಣ, ಹಾವೇರಿ, ಶ್ರೀರಂಗಪಟ್ಟಣ ಕಚೇರಿ ಸೇರಿದಂತೆ ಇತರೆ ಜಿಲ್ಲೆಗಳ ಸಬ್ ರಿಜಿಸ್ಟ್ರಾರ್‌ಗಳನ್ನು ಇಲ್ಲಿಗೆ ನಿಯೋಜಿಸಲಾಗಿದ್ದು, ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನಾವು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದೆವು. ಕಳೆದ ವರ್ಷ ಡಿಸೆಂಬರ್ 21 ಮತ್ತು 23 ರಂದು ಇನ್‌ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಶನ್ ಮತ್ತು ಸ್ಟಾಂಪ್‌ಗಳ ಆಯುಕ್ತ ಕೆಎ ದಯಾನಂದ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು, ಸಿಬ್ಬಂದಿಗಳಿಗೇಕೆ ಕೆಲಸ ಮಾಡಲು ಅನುಮತಿ ನೀಡಲಾಗುತ್ತಿಲ್ಲ ಎಂದು ಪ್ರಶ್ನಿಸಿತ್ತು. ಅವರು, ವರದಿ ಸಲ್ಲಿಸಲು 2 ದಿನ ಕಾಲಾವಕಾಶ ಕೋರಿದ್ದರು. ಆದರೆ, 8 ದಿನ ಕಳೆದರೂ ಏನೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ನಡುವೆ ಸಮಸ್ಯೆ ಸಂಬಂಧ ಪ್ರತಿಕ್ರಿಯೆ ನೀಡಲು ಯಾವುದೇ ಅಧಿಕಾರಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ. ಹೈಕೋರ್ಟ್ ನಲ್ಲಿ ಶುಕ್ರವಾರ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.
Advertisement