
ಮೈಸೂರು: ಬೆಂಗಳೂರು ಅರಮನೆ ಮೈದಾನ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸುಗ್ರೀವಾಜ್ಞೆ ಹೊರಡಿಸುವ ರಾಜ್ಯ ಸರ್ಕಾರದ ನಿರ್ಧಾರ ಮೈಸೂರು ರಾಜಮನೆತನದ ಮೇಲಿರುವ ದ್ವೇಷದಿಂದ ನಡೆದಿದೆ ಎಂಬ ಬಿಜೆಪಿ ನಾಯಕರ ಆರೋಪವನ್ನು ಕಾಂಗ್ರೆಸ್ ನಿರಾಕರಿಸಿದೆ.
ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು, ಸಿದ್ದರಾಮಯ್ಯ ಅವರು ಎಂದಿಗೂ ರಾಜಮನೆತನದ ವಿರುದ್ಧ ನಡೆದುಕೊಂಡಿಲ್ಲ. ಸಾರ್ವಜನಿಕ ಹಿತಾಸಕ್ತಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆಂದು ಹೇಳಿದರು.
3,000 ಕೋಟಿಗೂ ಹೆಚ್ಚು ಮೊತ್ತದ ಪರಿಹಾರವು ಕಾರ್ಯಸಾಧ್ಯವಲ್ಲ ಮತ್ತು ಯಾವುದೇ ವ್ಯಕ್ತಿ ಅಥವಾ ಗುಂಪನ್ನು ಗುರಿಯಾಗಿಸುವ ಬದಲು ಅಭಿವೃದ್ಧಿಯ ಅಡೆತಡೆಗಳನ್ನು ಪರಿಹರಿಸುವ ಗುರಿಯಿಂದ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಅರಮನೆ ಜಾಗ ವಶಕ್ಕೆ ಪಡೆಯಲು ಸುಘ್ರೀವಾಜ್ಞೆ ತಂದಿಲ್ಲ. ಈ ಜಾಗ ಸಾರ್ವಜನಿಕ ಉದ್ದೇಶಕ್ಕಾಗಿ 1996 ರಲ್ಲಿಯೇ ಅಂದಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರೇ ಸರ್ಕಾರದ ವಶಕ್ಕೆ ಪಡೆಯಲು ಮುಂದಾಗಿದ್ದರು. ಅರಮನೆ ಜಾಗ ವಶಕ್ಕೆ ಪಡೆಯಲು ಜೆಡಿಎಸ್ ಮತ್ತು ಬಿಜೆಪಿಯವರೆ ಈ ಹಿಂದೆ ಮುಂದಾಗಿದ್ದರು. ಇದೀಗ ಸಿದ್ಧರಾಮಯ್ಯ ಮುಖ್ಯಮಂತ್ರಿಯಾದ ನಂತರ ಅರಮನೆ ವಿಚಾರ ಮತ್ತು ಮಹರಾಣಿಯವರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಅಪಪ್ರಚಾರವನ್ನು ಮಾಡಲಾಗುತ್ತಿದೆ. ಸಿದ್ಧರಾಮಯ್ಯ ಅವರು 2013 ರಲ್ಲಿ ಸಿಎಂ ಆದಾಗ ಮತ್ತು ಈಗ ಸಿಎಂ ಆಗಿ ಒಂದುವರ್ಷದ ಅವಧಿಯಲ್ಲಿ ಅರಮನೆ ಮತ್ತು ಮಹರಾಣಿಯವರಿಗೆ ತೊಂದರೆ ಕೊಟ್ಟಿಲ್ಲ.
1996 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಅನೆಯ ಒಟ್ಟು 425 ಎಕರೆ ಜಾಗದಲ್ಲಿ 15.39 ಎಕರೆ ಪ್ರದೇಶದಲ್ಲಿ ಸಸ್ಯ ಸಂಗ್ರಹಾಲಯ, ತೋಟಗಾರಿಕೆ ಉದ್ಯಾನವನ ಅಭಿವೃದ್ದಿಪಡಿಸಲು ಅರಮನೆಯ ಮತ್ತು ಸುತ್ತಲಿನ ಜಾಗವನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು. ಆಗ ಜಯಚಾಮರಾಜ ಒಡೆಯರ್ ಕುಟುಂಬದವರು ಹೈಕೋಟ್೯ ನಲ್ಲಿ ಚಾಲೆಂಜ್ ಮಾಡಿದ್ದರು. 1997 ರಲ್ಲಿ ಹೈಕೋಟ್೯ ರಾಜ್ಯ ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿಯಿತು ಎಂದು ತಿಳಿಸಿದರು.
ನಂತರ 2011 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಸುಪ್ರೀಂಕೋಟ್೯ ಗೆ ಇಂಟೀರಿಯಮ್ ಅರ್ಜಿ ಸಲ್ಲಿಸಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಂದಣಿ ದಟ್ಟವಾಗಿದ್ದು ಜಯಮಹಲ್ ರಸ್ತೆ ಮತ್ತು ಬಳ್ಳಾರಿ ರಸ್ತೆ ಟ್ರಾಫಿಕ್ ನಿಂದ ಕೂಡಿದ್ದು ಈ ಹಿಂದೆ ವಶಕ್ಕೆ ಪಡೆಯಲು ಮುಂದಾಗಿದ್ದ 15.39 ಎಕರೆ ಜಾಗವನ್ನು ಸರ್ಕಾರಕ್ಕೆ ಬಿಡಿಸಿಕೊಡಬೇಕು ಎಂದು ಕೇಳಿದ್ದರು. ಸುಪ್ರೀಂಕೋಟ್೯ 2014 ರಲ್ಲಿ ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟುಕೊಡಬೇಕು ಎಂದು ಟ್ರಾನ್ಸ್ ವರ್ ಡೆವೆಲಪ್ ಮೆಂಟ್ ರೈಟ್ಸ್ (ಟಿಡಿಆರ್) ಜಾರಿ ಮಾಡಿ ಆದೇಶ ನೀಡುತ್ತದೆ. ಆದರೆ ನಂತರ ಅದನ್ನು ವಶಕ್ಕೆ ಪಡೆಯದೆ. 2019 ರಲ್ಲಿ ಮತ್ತೆ ಯಡಿಯೂರಪ್ಪ ಸಿಎಂ ಆದ ಮೇಲೆ ಟಿಡಿಆರ್ ಒಪ್ಪಿಕೊಂಡು ಸರ್ಟಿಫಿಕೇಟ್ ಸಲ್ಲಿಸಲು ಮುಂದಾಗುತ್ತಾರೆ. ಆಗ ನ್ಯಾಯಾಂಗದ ಆದೇಶವನ್ನು ಸಮಯಕ್ಕೆ ಉಪಯೋಗ ಮಾಡುಲ್ಲ ಹಾಗಾಗಿ ಇದು ನ್ಯಾಯಾಂಗ ಉಲ್ಲಂಘನೆಯಾಗಿದೆ ಎಂದು ಅರಮನೆಯವರು ಮತ್ತೆ ಕೇಸ್ ಹಾಕುತ್ತಾರೆ ಎಂದು ವಿವರಿಸಿದರು.
ಮಾ.15ರ 2024 ರಲ್ಲಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ವಿಚಾರ ಚರ್ಚೆಗೆ ಬರುತ್ತದೆ. ಆಗ ಬಿಬಿಎಂಪಿ ಅವರು ಟಿಡಿಆರ್ ಕೊಡಬಹುದು ಎಂದು ಹೇಳುತ್ತಾರೆ.ಟಿಡಿಆರ್ ಪ್ರಕಾರ 15.39 ಎಕರೆ ಪ್ರದೇಶಕ್ಕೆ 3011 ಕೋಟಿ ಕೊಡಬೇಕಾಗುತ್ತದೆ. ಇದು ಬೇಡ ಎಂದು ಅರಮನೆ ಜಾಗದಲ್ಲಿ ಅಂಡರ್ ಪಾಸ್ ಮಾಡಿರುವ ಕಾಲು ಎಕರೆ ಪ್ರದೇಶಕ್ಕೆ ಮಾತ್ರ ಟಿಡಿಆರ್ ಕೊಡಲು ಒಪ್ಪಿಗೆ ಸೂಚಿಸಲಾಗುತ್ತದೆ. ಟಿಡಿಆರ್ ಪ್ರಕಾರ ನಮಗೆ ಆಗುವುದಿಲ್ಲ ಎಂದು ಜ.20ರ 2025 ರಲ್ಲಿ ಸುಪ್ರೀಂ ಕೋಟ್೯ಗೆ ಅಫಿಡವಿಟ್ ಸಲ್ಲಿಸಲಾಗಿದೆ. ಆದರೂ ಕೆಲವರು ಸಿದ್ಧರಾಮಯ್ಯ ಅವರನ್ನು ಖಳನಾಯಕರಂತೆ ಬಿಂಬಿಸಿ ಆರೋಪ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
Advertisement