ಬೆಂಗಳೂರಿನಲ್ಲಿ ನಾನ್-ಪೀಕ್ ಅವರ್​ನಲ್ಲೂ ಭಾರೀ ಟ್ರಾಫಿಕ್; ಕಂಗೆಟ್ಟ ವಾಹನ ಸವಾರರು!

10 ವರ್ಷಗಳಲ್ಲಿ, ಬೆಂಗಳೂರಿನಲ್ಲಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಸಂಖ್ಯೆ ದ್ವಿಗುಣಗೊಂಡಿದೆ.
ಬೆಂಗಳೂರು ಟ್ರಾಫಿಕ್
ಬೆಂಗಳೂರು ಟ್ರಾಫಿಕ್
Updated on

ಬೆಂಗಳೂರು: ಬೆಂಗಳೂರು ಅಂದ್ರೆ ಟ್ರಾಫಿಕ್, ಟ್ರಾಫಿಕ್ ಅಂದ್ರೆ ಬೆಂಗಳೂರು​ ಅನ್ನೋ ಕುಖ್ಯಾತಿ ಪಡೆದಿರುವ ಸಿಲಿಕಾನ್‌ ಸಿಟಿಯಲ್ಲಿ 'ಪೀಕ್-ಅವರ್ ನಲ್ಲಿ ಮಾತ್ರ ಭಾರಿ ಟ್ರಾಫಿಕ್ ಇರುತ್ತದೆ. ಉಳಿದ ಸಮಯದಲ್ಲಿ ಟ್ರಾಫಿಕ್ ಸ್ವಲ್ಪ ಕಮ್ಮಿ ಇರುತ್ತದೆ ಎಂದು ಜನ ಭಾವಿಸಿದ್ದರು. ಆದರೆ ಜನ ಅಂದುಕೊಂಡಿದ್ದು ತಪ್ಪು. ಈಗ ನಾನ್ ಪೀಕ್-ಅವರ್​ನಲ್ಲೂ ರಸ್ತೆಗಳು ವಾಹನಗಳಿಂದ ತುಂಬಿ ತುಳುಕುತ್ತಿವೆ.

ನಗರದಾದ್ಯಂತ ವ್ಯಾಪಾರ ಚಟುವಟಿಕೆ ಹರಡುವಿಕೆ, ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಸಂಖ್ಯೆಯಲ್ಲಿನ ಹೆಚ್ಚಳ, ಬಸ್ ದರ ಏರಿಕೆ, ವಸತಿ ಪ್ರದೇಶಗಳು ಮತ್ತು ಉದ್ಯೋಗ ವಲಯಗಳ ಅವ್ಯವಸ್ಥಿತ ಬೆಳವಣಿಗೆ ಟ್ರಾಫಿಕ್ ಸಮಸ್ಯೆಗೆ 'ಮೂಲ'ವಾಗಿದ್ದು, ಈ ಸಂಚಾರ ದಟ್ಟಣೆ ಕೇವಲ ಪೀಕ್ ಅವರ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ.

"ನಾನು ಸಾಮಾನ್ಯವಾಗಿ ಪೀಕ್ ಅವರ್‌ಗಳನ್ನು ತಪ್ಪಿಸಿ ನನ್ನ ಪ್ರಯಾಣವನ್ನು ಆರಂಭಿಸುತ್ತೇನೆ. ಆದ್ದರಿಂದ ನಾನು ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವುದಿಲ್ಲ. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ, ನಾನು ಯಾವ ಸಮಯದಲ್ಲಿ ಪ್ರಯಾಣ ಪ್ರಾರಂಭಿಸಿದರೂ, ತಡರಾತ್ರಿ ಮತ್ತು ಬೆಳಗಿನ ಜಾವ ಹೊರತುಪಡಿಸಿ, ನನಗೆ ಟ್ರಾಫಿಕ್ ಜಾಮ್ ತಪ್ಪಿಸಲು ಸಾಧ್ಯವಾಗುತ್ತಿಲ್ಲ. ನಗರದಲ್ಲಿ ಪ್ರಯಾಣ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ" ಎಂದು ಉದ್ಯಮಿ ಪ್ರಕಾಶ್ ಮುರುಗನ್ ಅವರು ಹೇಳಿದ್ದಾರೆ.

ಬೆಂಗಳೂರು ಟ್ರಾಫಿಕ್
BBMP: ಟ್ರಾಫಿಕ್ ನಿರ್ವಹಣೆಗೆ ₹15,000 ಕೋಟಿ ವೆಚ್ಚದಲ್ಲಿ ಹೊಸ ಪ್ಲಾನ್; ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕ್ಕರ್, ಅಂಡರ್ ಪಾಸ್ ಪ್ರಸ್ತಾಪ!

‘10 ವರ್ಷಗಳಲ್ಲಿ ಕಾರು, ದ್ವಿಚಕ್ರ ವಾಹನಗಳ ಸಂಖ್ಯೆ ದ್ವಿಗುಣ’

ಮುಂಬೈ ಉದಾಹರಣೆ ನೀಡಿದ ಐಐಎಸ್‌ಸಿಯ ಮೊಬಿಲಿಟಿ ತಜ್ಞ ಆಶಿಶ್ ವರ್ಮಾ ಅವರು, “ಮುಂಬೈನಲ್ಲಿ ಸಂಚಾರ ಒಂದು ದಿಕ್ಕಿನಲ್ಲಿ ಕಂಡುಬರುತ್ತದೆ. ವಾಹನಗಳು ಬೆಳಗ್ಗೆ ಉತ್ತರ ಮುಂಬೈನಿಂದ ದಕ್ಷಿಣ ಮುಂಬೈಗೆ ಮತ್ತು ಸಂಜೆ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದವು.

ಸಂಚಾರ ದಟ್ಟಣೆ ಬೆಳಗ್ಗೆ ಮತ್ತು ಸಂಜೆ ಮಾತ್ರ ಇತ್ತು. ಆದರೆ ಈಗ, ವಿಷಯಗಳು ಬದಲಾಗಿವೆ ಮತ್ತು ಮುಂಬೈ ಸಹ ದಿನವಿಡೀ ಸಂಚಾರ ದಟ್ಟಣೆಯನ್ನು ಕಾಣುತ್ತಿದೆ. ಬೆಂಗಳೂರಿನಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.

ವರ್ಷಗಳ ಹಿಂದೆ, ಬೆಂಗಳೂರಿನಲ್ಲಿ ಬೆಳಗ್ಗೆ 8.30 ರಿಂದ ಬೆಳಗ್ಗೆ 10 ರವರೆಗೆ ಮತ್ತು ಸಂಜೆ 5.30 ರಿಂದ ರಾತ್ರಿ 8 ರವರೆಗೆ ಸಂಚಾರ ದಟ್ಟಣೆ ಗರಿಷ್ಠ ಮಟ್ಟದಲ್ಲಿರುತ್ತಿತ್ತು. ಹೆಚ್ಚಿನ ವಾಹನಗಳು ಕೇಂದ್ರ ವ್ಯಾಪಾರ ಜಿಲ್ಲೆ(ಸಿಬಿಡಿ) ಪ್ರವೇಶಿಸುತ್ತಿದ್ದವು. ಪೀಕ್ ಅವರ್‌ಗಳನ್ನು ಹೊರತುಪಡಿಸಿ, ನಗರದ ಯಾವುದೇ ಭಾಗಕ್ಕೆ ಪ್ರಯಾಣಿಸುವುದು ತ್ವರಿತ ಮತ್ತು ಸುಲಭವಾಗಿತ್ತು. ಆದರೆ ಈಗ ಯಾವುದೇ ಸಮಯದಲ್ಲಿ ಜನ ಪ್ರಯಾಣ ಆರಂಭಿಸಿದರೂ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುತ್ತಾರೆ ಮತ್ತು ತಮ್ಮ ಗಮ್ಯಸ್ಥಾನ ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ” ಎಂದು ವರ್ಮಾ ಹೇಳಿದ್ದಾರೆ.

10 ವರ್ಷಗಳಲ್ಲಿ, ಬೆಂಗಳೂರಿನಲ್ಲಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಸಂಖ್ಯೆ ದ್ವಿಗುಣಗೊಂಡಿದೆ. ಆದರೆ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಬಸ್‌ಗಳನ್ನು ಖರೀದಿಸಿಲ್ಲ. ಹೆಚ್ಚಿನ ಬಸ್ಸುಗಳು ಇಲ್ಲದ ಕಾರಣ, ಜನರು ವೈಯಕ್ತಿಕ ವಾಹನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಬಸ್ ಪ್ರಯಾಣಿಕರ ವೇದಿಕೆಯಾದ ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆಯ ಸದಸ್ಯ ವಿನಯ್ ಶ್ರೀನಿವಾಸ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com