
ಹುಬ್ಬಳ್ಳಿ: ನಗರದಲ್ಲಿ ಮಂಗಳವಾರ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕೊಲೆ ಪ್ರಕರಣದ ಮೂವರು ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಆರೋಪಿಗಳ ಕಾಲಿಗೆ ಗುಂಡು ತಗುಲಿದೆ. ಅವರನ್ನು ಅಭಿಷೇಕ್, ವಿನೋದ್ ಮತ್ತು ಯಲ್ಲಪ್ಪ ಎಂದು ಗುರುತಿಸಲಾಗಿದೆ. ವಿದ್ಯಾನಗರ ಮತ್ತು ಕಮರಿಪೇಟೆ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಶ್ರೀಮಂತ ಹುಣಸಿಕಟ್ಟಿ ಮತ್ತು ಸುನೀಲ್ ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ.
ಸೋಮವಾರ ತಡರಾತ್ರಿ ಉಣಕಲ್ ಕೆರೆ ಬಳಿ 24 ವರ್ಷದ ಆಕಾಶ್ ವಾಲ್ಮೀಕಿ ಎಂಬಾತನನ್ನು ಆರೋಪಿಗಳು ಕಡಿದು ಕೊಂದಿದ್ದಾರೆ. ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಬಂಧಿಸಲು ತೆರಳಿದ್ದರು. ಆದರೆ, ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ, ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ನಾಲ್ಕು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಆರೋಪಿಗಳು ತಪ್ಪಿಸಿಕೊಳ್ಳಲು ಮುಂದಾದಾಗ ಅಧಿಕಾರಿಗಳು ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಆರೋಪಿಗಳನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎನ್‌ಕೌಂಟರ್ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಶ್ರೀಮಂತ ಹುಣಸಿಕಟ್ಟಿ, ಸುನೀಲ್ ಮತ್ತು ಕಾನ್‌ಸ್ಟೆಬಲ್‌ಗಳಾದ ಮುತ್ತು ಲಮಾಣಿ ಮತ್ತು ಶರಣಗೌಡ ಲಮಾಣಿ ಗಾಯಗೊಂಡಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆರೋಪಿಗಳು ಈ ಪ್ರದೇಶದಲ್ಲಿ ಭಯ ಹುಟ್ಟಿಸಲು ಆಕಾಶ್ ವಾಲ್ಮೀಕಿ ಎಂಬಾತನನ್ನು ಕೊಂದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಪ್ರಕಾರ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಅಪರಾಧದಲ್ಲಿ ಭಾಗಿಯಾಗಿರುವ ಇತರ ಐದು ವ್ಯಕ್ತಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಕಳೆದ ವರ್ಷ ಶಿವರಾತ್ರಿ ಹಬ್ಬದ ವೇಳೆ ಆರೋಪಿಗಳು ಮತ್ತು ಆಕಾಶ್ ನಡುವೆ ಜಗಳ ನಡೆದಿತ್ತು. ಈ ವಿಚಾರದಲ್ಲಿ ದ್ವೇಷ ಸಾಧಿಸಿದ ಆರೋಪಿಗಳು ಆಕಾಶ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
ಗಾಯಗೊಂಡ ಪೊಲೀಸರು ಮತ್ತು ಆರೋಪಿಗಳನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಗೆ ದಾಖಲಿಸಲಾಗಿದೆ. ಕಮಿಷನರ್ ಶಶಿಕುಮಾರ್ ಗಾಯಾಳು ಪೊಲೀಸರನ್ನು ಭೇಟಿ ಮಾಡಿ ನಂತರ ಆಸ್ಪತ್ರೆಗೆ ತೆರಳಿ ಆರೋಪಿಗಳನ್ನು ಭೇಟಿ ಮಾಡಿದರು.
Advertisement