
ಬೆಂಗಳೂರು: ರಾಜ್ಯಾದ್ಯಂತ ಟ್ರಾನ್ಸ್‌ಫಾರ್ಮರ್‌ಗಳ ವಾರ್ಷಿಕ ಉತ್ಪಾದನೆಯನ್ನು 2,500 ಕ್ಕೆ ಹೆಚ್ಚಿಸಲಾಗುತ್ತಿದ್ದು, ಇದು ಬೇಡಿಕೆ ಮತ್ತು ಪೂರೈಕೆಯಲ್ಲಿ ದಕ್ಷತೆಯನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಸೋಮವಾರ ಹೇಳಿದರು.
ಸರ್ಕಾರಿ ಸ್ವಾಮ್ಯದ ವಿದ್ಯುತ್ ಪರಿವರ್ತಕಗಳ (ಟ್ರಾನ್ಸ್ ಫಾರ್ಮರ್) ಉತ್ಪಾದನಾ ಸಂಸ್ಥೆ ಕರ್ನಾಟಕ ವಿದ್ಯುತ್ ಕಾರ್ಖಾನೆ ಆವರಣದಲ್ಲಿ ತಲೆ ಎತ್ತಲಿರುವ ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಸಚಿವರು, ಕವಿಕಾದಲ್ಲಿ ವಾರ್ಷಿಕ 2,500 ವಿದ್ಯುತ್ ಪರಿವರ್ತಕಗಳನ್ನು ಸಿದ್ಧಪಡಿಸುವ ಸಾಮರ್ಥ್ಯವಿದೆ. ಆದರೆ, ಅಷ್ಟು ಪ್ರಮಾಣದಲ್ಲಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಅಗತ್ಯ ಕೆಲಸದ ಬಂಡವಾಳವನ್ನು (ವರ್ಕಿಂಗ್ ಕ್ಯಾಪಿಟಲ್) ಎಸ್ಕಾಂಗಳು ಮತ್ತು ಬ್ಯಾಂಕ್ ಮೂಲಕ ಒದಗಿಸಲಾಗುವುದು. ಕಾಲಮಿತಿಯಲ್ಲಿ ವಾರ್ಷಿಕ 2,500 ವಿದ್ಯುತ್ ಪರಿವರ್ತಕಗಳನ್ನು ಇಲ್ಲಿ ಉತ್ಪಾದಿಸುವುದರ ಜತೆಗೆ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಸುಮಾರು 14 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ತಿ ಘಟಕವನ್ನು ಸ್ಥಾಪಿಸಲಾಗುತ್ತಿದ್ದು, 20 ಮೆಗಾವ್ಯಾಟ್ ಸಾಮರ್ಥ್ಯದವರೆಗಿನ ಪರಿವರ್ತಕಗಳನ್ನು ದುರಸ್ತಿ ಮಾಡುವ ಸಾಮರ್ಥ್ಯ ಈ ಘಟಕ ಹೊಂದಲಿದೆ. ರು ತಿಂಗಳಲ್ಲಿ ಈ ಘಟಕದ ಕಾಮಗಾರಿ ಪೂರ್ಣಗೊಳಿಸಿ ವಿದ್ಯುತ್ ಪರಿವರ್ತಕಗಳ ದುರಸ್ತಿ ಕಾರ್ಯ ಆರಂಭಿಸಲಾಗುವುದು. ಇದು ಸರ್ಕಾರಿ ಕಾರ್ಖಾನೆಯಾಗಿರುವುದರಿಂದ ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂಗಳ ವ್ಯಾಪ್ತಿಯ ಪರಿವರ್ತಕಗಳನ್ನು ಇಲ್ಲಿಯೇ ದುರಸ್ತಿ ಮಾಡಲಾಗುವುದು ಎಂದು ತಿಳಿಸಿದರು.
ಕವಿಕಾಗೆ ಎಸ್ಕಾಗಳಿಂದ 50 ಕೋಟಿ ರೂ. ಕೆಲಸದ ಬಂಡವಾಳ ಪೂರೈಸುವಂತೆ ಸೂಚಿಸಲಾಗಿದೆ. ಬೆಸ್ಕಾಂ ವತಿಯಿಂದ 12.50 ಕೋಟಿ ರೂ. ಈಗಾಗಲೇ ಒದಗಿಸಲಾಗಿದೆ. ಉಳಿದ ಮೊತ್ತವನ್ನು ಶೀಘ್ರ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
Advertisement