
ಬೆಂಗಳೂರು: 11 ಜನರ ಸಾವಿಗೆ ಕಾರಣವಾದ ಚಿನ್ನಸ್ವಾಮಿ ಕ್ರೀಡಾಂಗಣ ಆವರಣದಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿಗಳ ಅಮಾನತು ರದ್ದು ಮಾಡಿರುವ ಕೇಂದ್ರ ಆಡಳಿತ ನ್ಯಾಯಮಂಡಳಿ ಆದೇಶದ ವಿರುದ್ಧ ಮೇಲ್ಮನವಿ ಕುರಿತು ನಿರ್ಧರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಳೆದ ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ದುರಂತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು "ಪ್ರಾಥಮಿಕ ಹೊಣೆಗಾರ" ಎಂದು ಕೇಂದ್ರ ಆಡಳಿತ ನ್ಯಾಯಮಂಡಳಿ (CAT) ಮಂಗಳವಾರ ಅಭಿಪ್ರಾಯಪಟ್ಟಿತ್ತು. ಅಲ್ಲದೆ ಸಾಕಷ್ಟು ಆಧಾರಗಳಿಲ್ಲದೆ ರಾಜ್ಯ ಸರ್ಕಾರವು ಯಾಂತ್ರಿಕವಾಗಿ ಆದೇಶ ಹೊರಡಿಸಿತ್ತು.
ಅಂತೆಯೇ ಐಪಿಎಲ್ ಅಧಿಕಾರಿಗಳು ಮತ್ತು ಪೊಲೀಸರ ಅಮಾನತಿಗೆ ಸಾಕಷ್ಟು ಕಾರಣಗಳೇ ಇಲ್ಲ ಎಂದು ಹೇಳಿದ್ದ ಸಿಎಟಿ ಯಾವುದೇ ಸಾಕಷ್ಟು ಆಧಾರಗಳಿಲ್ಲದೆ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಆದ್ದರಿಂದ, ಆಕ್ಷೇಪಾರ್ಹ ಆದೇಶವನ್ನು ರದ್ದುಗೊಳಿಸಬಹುದು ಎಂದು ಹೇಳಿತ್ತು.
ಅಲ್ಲದೆ ಕೂಡಲೇ ಅಮಾನತು ರದ್ದುಗೊಳಿಸಿ, ಅವರನ್ನು ತಕ್ಷಣವೇ ಮರುಸ್ಥಾಪಿಸಬೇಕು ಮತ್ತು ಅಮಾನತು ಅವಧಿಯನ್ನು ಪೂರ್ಣ ವೇತನ ಮತ್ತು ಭತ್ಯೆಗಳೊಂದಿಗೆ ಕರ್ತವ್ಯವೆಂದು ಪರಿಗಣಿಸಲಾಗುತ್ತದೆ. ಈ ಆದೇಶ ಅಮಾನತುಗೊಂಡ ಎಲ್ಲ ಅಧಿಕಾರಿಗಳಿಗೂ ಅನ್ವಯಿಸಬೇಕು ಎಂದು ಹೇಳಿತ್ತು.
ಮೇಲ್ಮನವಿ ಕುರಿತು ನಿರ್ಧಾರ ಎಂದ ಸಿಎಂ
ಇನ್ನು ಇದೇ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಗಳ ಅಮಾನತು ರದ್ದು ಮಾಡಿರುವ ಕೇಂದ್ರ ಆಡಳಿತ ನ್ಯಾಯಮಂಡಳಿ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರ ಜತೆ ಮಾತನಾಡಿದ ಅವರು, 'ಸಿಎಟಿ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು' ಎಂದರು. ಅಂತೆಯೇ 'ಸಿದ್ದರಾಮಯ್ಯ ಅದೃಷ್ಟದಿಂದ ಮುಖ್ಯಮಂತ್ರಿಯಾಗಿದ್ದಾರೆ ಎಂಬ ಶಾಸಕ ಬಿ.ಆರ್. ಪಾಟೀಲ ಹೇಳಿಕೆ ಬಗ್ಗೆ ಮಾಹಿತಿಯಿಲ್ಲ. ಬಿ.ಆರ್. ಪಾಟೀಲ ಹಾಗೂ ನಾನು ಒಟ್ಟಿಗೆ ಶಾಸಕರಾಗಿದ್ದೆವು. ನಂತರ ನನಗೆ ಮುಖ್ಯಮಂತ್ರಿ ಅವಕಾಶ ದೊರೆತಿದೆ. ಈ ಅರ್ಥದಲ್ಲಿ ಅವರು ಹೇಳಿಕೆ ನೀಡಿರಬಹುದು' ಎಂದು ಹೇಳಿದರು.
Advertisement