
ಬಳ್ಳಾರಿ: ಬಳ್ಳಾರಿ ಜಿಲ್ಲೆಯ ವಿವಿಧ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಜೂನ್ 27 ರಿಂದ ಜುಲೈ 7 ರವರೆಗೆ ಜರುಗುವ ಮೊಹರಂ ಹಬ್ಬ ಆಚರಣೆಗೆ ನಿಷೇಧ ಹೇರಲಾಗಿದೆ.
ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹಬ್ಬ ಆಚರಣೆಗೆ ನಿಷೇಧ ಹೇರಿ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಅವರು ಆದೇಶ ಹೊರಡಿಸಿದ್ದಾರೆ.
ʼಮೊಹರಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ವಿವಿಧ ತಾಲ್ಲೂಕುಗಳ ಕೆಲ ಗ್ರಾಮಗಳಲ್ಲಿ ವೈಷಮ್ಯ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಮೊಹರಂ ಆಚರಿಸುವ ಸಂದರ್ಭದಲ್ಲಿ ಶಾಂತಿ, ಸುವ್ಯಸ್ಥೆಗೆ ಧಕ್ಕೆ ಉಂಟಾಗುವ ಬಗ್ಗೆ ವರದಿಗಳು ಇರುವುದರಿಂದ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
ಪೊಲೀಸ್ ಬಂದೋಬಸ್ತ್ ಪರಿಣಾಮಕಾರಿಯಾಗಿ ಜಾರಿಗೆ ತರಲು ಕರ್ನಾಟಕ ಪೊಲೀಸ್ ಕಾಯ್ದೆನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿಗಳು, ಜೂ.27 ರಿಂದ ಜು.7 ರವರೆಗೆ ಆಚರಿಸಲ್ಪಡುವ ಮೊಹರಂ ಹಬ್ಬವನ್ನು ಜಿಲ್ಲೆಯ ವಿವಿಧ ತಾಲ್ಲೂಕುಗಳ ಕೆಲ ಗ್ರಾಮಗಳಲ್ಲಿ ನಿಷೇಧಿಸಲಾಗಿದೆ.
ಕರ್ನಾಟಕ ಪೊಲೀಸ್ ಕಾಯ್ದೆ, 1963 ರ ಸೆಕ್ಷನ್ 35 (ಎ), (ಬಿ), (ಡಿ), (ಇ) ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದ್ದು, ನಿಷೇಧಾಜ್ಞೆಯ ಸಮಯದಲ್ಲಿ ಈ ಪ್ರದೇಶಗಳಲ್ಲಿ ಸಾರ್ವಜನಿಕ ಸಭೆಗಳು, ಮೆರವಣಿಗೆಗಳು ಮತ್ತು ಪ್ರತಿಕೃತಿಗಳನ್ನು (ಪಂಜಾ) ಜೋಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ತಾಳೂರು ರಸ್ತೆಯ ಕನ್ನಡ ನಗರ ಮುಖ್ಯ ರಸ್ತೆಯ ನ್ಯಾಯಾಧೀಶರ ವಸತಿಗೃಹ ಕಾಂಪೌಂಡ್ ಪಕ್ಕದಲ್ಲಿ ಮಹಾನಂದಿಕೊಟ್ಟ ಒಳಗಡೆ, ಸಿರುಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಸೂಗೂರು, ಮುದೇನೂರು, ಹೀರೆಹಾಳ್, ನಾಡಂಗ, ಬಂಡ್ರಾಳ್, ದೇಶನೂರು, ಕೆ.ಬೆಳಗಲ್, ಅಲಬನೂರು ಗ್ರಾಮಗಳು. ತೆಕ್ಕಲಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ತೆಕ್ಕಲಕೋಟೆ, ಹಳೇಕೋಟೆ, ಉಪ್ಪಾರಹೊಸಳ್ಳಿ, ಉಡೇಗೋಳ, ಅರಳಿಗನೂರು ಗ್ರಾಮಗಳು.
ಸಿರಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಿರಿಗೇರಿ, ಕೂರಿಗನೂರು, ತಾಳೂರು, ಕರೂರು ಗ್ರಾಮಗಳು. ಪಿಡಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಸುಂಡಿ ಗ್ರಾಮ, ಕಂಪ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ನಂ.15-ಗೋನಾಳು ಗ್ರಾಮದಲ್ಲಿ ಹಬ್ಬ ಆಚರಣೆಗೆ ನಿಷೇಧ ಹೇರಲಾಗಿದೆ.
ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 35(ಎ) ಕತ್ತಿಗಳು, ಕಠಾರಿಗಳು, ಈಟಿಗಳು, ಕೋಲುಗಳು, ಬಂದೂಕುಗಳು, ಚಾಕುಗಳು, ಲಾಠಿ ಅಥವಾ ಗಾಯಕ್ಕೆ ಕಾರಣವಾಗುವ ಯಾವುದೇ ವಸ್ತುಗಳನ್ನು ಹೊಂದುವುದನ್ನು ನಿಷೇಧಿಸುತ್ತದೆ.
ಹೆಚ್ಚುವರಿಯಾಗಿ, ವ್ಯಕ್ತಿಗಳ ಆಕ್ರಮಣಕಾರಿ ಅಥವಾ ಅಗೌರವದ ಚಿತ್ರಗಳ ಪ್ರದರ್ಶನ, ಸಾರ್ವಜನಿಕ ಭಾಷಣಗಳು, ಘೋಷಣೆಗಳು, ಸಂಗೀತ, ಧ್ವನಿವರ್ಧಕಗಳ ಬಳಕೆ ಅಥವಾ ಸಾರ್ವಜನಿಕ ಸಭ್ಯತೆ ಅಥವಾ ನೈತಿಕತೆಯನ್ನು ಉಲ್ಲಂಘಿಸುವ ಪ್ರದರ್ಶನಗಳನ್ನು ಅನುಮತಿಸಲಾಗುವುದಿಲ್ಲ. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
Advertisement