ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಮನಗರ ನಂತರ ಮತ್ತೊಂದು ಜಿಲ್ಲೆಯ ಹೆಸರು ಬದಲಾವಣೆಗೆ ನಿರ್ಧರಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಬಾಗೇಪಲ್ಲಿ ಹೆಸರನ್ನು ಮರುನಾಮಕರಣ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ನಂದಿಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯನ್ನು ಭಾಗ್ಯನಗರ ಎಂದು ಮರು ನಾಮಕರಣ ಮಾಡಲು ಅನುಮೋದನೆ ನೀಡಲಾಗಿದೆ. ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ತಾಲ್ಲೂಕುಗಳನ್ನೊಳಗೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರುನಾಮಕರಣ ಮಾಡಲಾಗಿದೆ.
ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ಬಿರುಸಾಗಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆಯ ಚರ್ಚೆಗಳಿಗೆ ಅಂತ್ಯ ಹಾಡಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಹುದ್ದೆಯ ಆಕಾಂಕ್ಷಿಯಾಗಿರುವ ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುವುದಕ್ಕೆ ನನಗೆ ಯಾವುದೇ ಆಕ್ಷೇಪವಿಲ್ಲ. ಸದ್ಯಕ್ಕೆ ನನಗೆ ಬೆಂಬಲ ನೀಡದೇ ಬೇರೆ ದಾರಿ ಇಲ್ಲ. ನಾನು ಕಾಂಗ್ರೆಸ್ ಹೈಕಮಾಂಡ್‌ನ ನಿರ್ದೇಶನಗಳನ್ನು ಪಾಲಿಸುವುದಾಗಿ ಹೇಳಿದರು. ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿರುವ ನನಗೆ ಪಕ್ಷದ ಶಿಸ್ತು ಮುಖ್ಯ. ನನ್ನನ್ನು ಸಿಎಂ ಮಾಡುವಂತೆ ನಾನು ಯಾರನ್ನೂ ಕೇಳಿಲ್ಲ. ನಾಯಕತ್ವ ಬದಲಾವಣೆಯ ವಿಷಯದ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡುವ ನಾಯಕರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.
ಬೆಂಗಳೂರಿನ ಇನ್ಫೋಸಿಸ್‌ನ ಕಚೇರಿಯ ಶೌಚಾಲಯದೊಳಗೆ ಮಹಿಳೆಯೊಬ್ಬರ ವಿಡಿಯೋ ರೆಕಾರ್ಡ್ ಮಾಡಿದ ಆರೋಪದ ಮೇಲೆ ಟೆಕ್ಕಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ 28 ವರ್ಷದ ಉದ್ಯೋಗಿ ಸ್ವಪ್ನಿಲ್ ನಾಗೇಶ್ ಮಲಿ ಎಂಬಾತನನ್ನು ಬಂಧಿಸಲಾಗಿದೆ. ಶೌಚಾಲಯದಲ್ಲಿ ಮಹಿಳಾ ಉದ್ಯೋಗಿಯ ವಿಡಿಯೋ ರೆಕಾರ್ಡ್ ಮಾಡುವಾಗಲೇ ನಾಗೇಶ್ ಸ್ವಪ್ನಿಲ್ ಮಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದನು. ನಾಗೇಶ್ ವಿಡಿಯೋ ಮಾಡುತ್ತಿರುವುದನ್ನು ನೋಡಿದ ಮಹಿಳೆ ಕಿರುಚಿಕೊಂಡಿದ್ದರು. ಆಗ ನಾಗೇಶ್ ಅಲ್ಲಿಯೇ ಮಹಿಳಾ ಉದ್ಯೋಗಿಯ ಕ್ಷಮೆ ಕೇಳಿದ್ದಾನೆ. ಇನ್ನು ಸ್ಥಳಕ್ಕೆ ಬಂದ ಎಚ್‌ಆರ್ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ನಾಗೇಶ್ ಮೊಬೈಲ್ ನಲ್ಲಿ ಸುಮಾರು 30ಕ್ಕೂ ಹೆಚ್ಚು ಮಹಿಳೆಯರ ವಿಡಿಯೋ ಪತ್ತೆಯಾಗಿದೆ. ಈ ಬಗ್ಗೆ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಹಾಸನದಲ್ಲಿ ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾರಣಗಳಿಂದ ಸಾವಿನ ಸಂಖ್ಯೆ ಅಧಿಕವಾಗಿದ್ದು ಇದಕ್ಕೆ ಕೋವಿಡ್ ಲಸಿಕೆ ಕಾರಣವಾಗಿರಬಹುದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದೇಹ ವ್ಯಕ್ತಪಡಿಸಿದ್ದರು. ಇದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ, ದೆಹಲಿ ಸ್ಪಷ್ಟನೆ ನೀಡಿದೆ. ಈ ಎರಡೂ ಸಂಸ್ಥೆಗಳು ನಡೆಸಿದ ವ್ಯಾಪಕ ಅಧ್ಯಯನಗಳು ಕೋವಿಡ್ ಲಸಿಕೆಗಳು ಮತ್ತು ಹಠಾತ್ ಸಾವುಗಳ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ಕಂಡುಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೋವಿಡ್ ಸೋಂಕಿನ ಸಮಯದಲ್ಲಿ ಜನರಿಗೆ ಕೋವಿಡ್ ಲಸಿಕೆಯನ್ನು ಆತುರವಾಗಿ ನೀಡಿದ್ದೆ ಜನರು ಇಂದು ಹಠಾತ್ ಪ್ರಾಣ ಕಳೆದುಕೊಳ್ಳುತ್ತಿರುವುದಕ್ಕೆ ಕಾರಣವಾಗಿರಬಹುದು ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದರು.
ರಾಜ್ಯ ಭಾರಿ ಸುದ್ದಿಗೆ ಗ್ರಾಸವಾಗಿ ಇತ್ತೀಚೆಗೆ ನಿಷೇಧಕ್ಕೊಳಗಾಗಿದ್ದ ಬೈಕ್ ಟ್ಯಾಕ್ಸಿ ಸೇವೆ ಕುರಿತು ಕೇಂದ್ರ ಸರ್ಕಾರ ಮಹತ್ವದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಪಿಡೊ, ಉಬರ್ ಮತ್ತು ಓಲಾದಂತಹ ಬೈಕ್ ಟ್ಯಾಕ್ಸಿ ಪ್ಲಾಟ್‌ಫಾರ್ಮ್‌ಗಳಿಗೆ ಪರಿಹಾರವಾಗಿ ಜುಲೈ 1ರಂದು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರನ್ವಯ ಪ್ರಯಾಣಿಕರ ಸವಾರಿಗಳಿಗೆ ಸಾರಿಗೆಯೇತರ ಮೋಟಾರ್ ಸೈಕಲ್‌ಗಳ ಬಳಕೆಯನ್ನು ಅನುಮತಿ ನೀಡಲಾಗಿದೆ. ರಾಜ್ಯಗಳು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 67(3)ರ ಅಡಿಯಲ್ಲಿ ಅಂತಹ ಬೈಕ್ಗಳ ಸಂಗ್ರಾಹಕತೆಯನ್ನು ಅಧಿಕೃತಗೊಳಿಸಬಹುದು. ದೈನಂದಿನ, ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳ ಆಧಾರದ ಮೇಲೆ ಶುಲ್ಕವನ್ನು ವಿಧಿಸಲು ಸಹ ಅನುಮತಿಸಲಾಗಿದೆ. ಹೊಸ ಮಾರ್ಗಸೂಚಿಗಳ ಅಡಿಯಲ್ಲಿ, ಅಗ್ರಿಗೇಟರ್ ಗಳು ಸುರಕ್ಷತೆ, ಸವಾರರ ಆನ್‌ಬೋರ್ಡಿಂಗ್, ವಿಮೆ ಮತ್ತು ಇತರ ಷರತ್ತುಗಳನ್ನು ಸಹ ಪಾಲಿಸಬೇಕು ಎಂದು ಹೇಳಿದೆ. ಇದೇ ವೇಳೆ ಬೈಕ್ ಟ್ಯಾಕ್ಸಿ ಸೇವೆಗಳ ಅನುಮೋದನೆ ಕುರಿತು ಅಂತಿಮ ನಿರ್ಣಯ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇರುತ್ತದೆ ಎಂದೂ ಹೇಳಲಾಗಿದೆ.
Advertisement