
ಬೆಂಗಳೂರು: ಭೂ ಸುರಕ್ಷಾ ಯೋಜನೆಯಡಿ, ಈ ವರ್ಷದ ಡಿಸೆಂಬರ್ ವೇಳೆಗೆ 100 ಕೋಟಿ ಪುಟಗಳನ್ನು ಡಿಜಿಟಲೀಕರಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಇದು ಜನರು ತಮ್ಮ ದಾಖಲೆಗಳನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ಹೇಳಿದರು.
ವಿಕಾಸಸೌಧದಲ್ಲಿ ಗುರುವಾರ ವಿಡಿಯೋ ಕಾನ್ಸರೆನ್ಸ್ ಮೂಲಕ ಎಲ್ಲ ಜಿಲ್ಲಾಧಿಕಾರಿ ಗಳೊಂದಿಗೆ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ತಾಲ್ಲೂಕು ಮಟ್ಟದ ಎಸಿ ಕಚೇರಿಗಳು ಮತ್ತು ಜಿಲ್ಲಾ ಕೇಂದ್ರದಲ್ಲಿರುವ ಡಿಸಿ ಕಚೇರಿಗಳಲ್ಲಿ ಲಭ್ಯವಿರುವ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸಲಾಗುವುದು ಎಂದು ಹೇಳಿದರು.
ಒಟ್ಟಾರೆಯಾಗಿ, 29.8 ಕೋಟಿ ಪುಟಗಳನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದ್ದು, 22 ತಾಲ್ಲೂಕುಗಳ ಕೆಲಸ ಪೂರ್ಣಗೊಂಡಿದೆ. ಅಧಿಕಾರಿಗಳು ಮುಂದಿನ ಆರು ತಿಂಗಳಲ್ಲಿ ಉಳಿದ ಕೆಲಸವನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಇನ್ನೂ ಹೆಚ್ಚಿನವುಗಳಿದ್ದರೆ ಹೆಚ್ಚುವರಿಯಾಗಿ ಎರಡು ತಿಂಗಳುಗಳ ಕಾಲಾವಕಾಶ ನೀಡಲಾಗುವುದು ಎಂದು ತಿಳಿಸಿದರು.
ಸರ್ಕಾರದ ಈ ಕ್ರಮದಿಂದ ಭೂ ಮಾಲೀಕರು ಭೂ ದಾಖಲೆಗಾಗಿ ಸರ್ಕಾರಿ ಕಚೇರಿ ಅಲೆಯುವ ತಾಪತ್ರಯದಿಂದ ಮುಕ್ತಗೊಳಿಸಲಾಗುತ್ತಿದೆ. ರೈತರು ಆನ್‌ಲೈನ್ ಮೂಲಕವೇ ದಾಖಲೆಗೆ ಅರ್ಜಿ ಸಲ್ಲಿಸಿದರೆ, ಪ್ರಮಾಣೀಕರಿಸಿದ ದಾಖಲೆ ಗಳನ್ನು ಆನ್‌ಲೈನ್ ಮೂಲಕವೇ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂದರು.
ಈಗಾಗಲೇ ಪ್ರಾಯೋಗಿಕವಾಗಿ ಆನ್‌ಲೈನ್ ಮೂಲಕ ಭೂ ದಾಖಲೆ ನೀಡುವ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ. ಕಳೆದೊಂದು ತಿಂಗಳಲ್ಲಿ 16,849 ಮಂದಿ ಆನ್‌ಲೈನ್ ಮೂಲಕಭೂದಾಖಲೆಗಳಿಗೆ ಅರ್ಜಿ ಸಲ್ಲಿಸಿದ್ದು, ಅವರಿಗೆ 69,375 ಪುಟಗಳ ಪ್ರಮಾಣೀಕರಿಸಿದ ದಾಖಲೆಗಳನ್ನು ಆನ್‌ಲೈನ್ ಮೂಲಕವೇ ಒದಗಿಸಲಾಗಿದೆ. ಎಲ್ಲ ದಾಖಲೆಗಳು ಡಿಜಿಟಲಿಕರಣಗೊಳಿಸಿದ ನಂತರ ಪೂರ್ಣಪ್ರಮಾದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ವಿವರಿಸಿದರು.
ರಾಜ್ಯ ಸರ್ಕಾರದ ಭೂ ಗ್ಯಾರಂಟಿ ಅಭಿಯಾನಕ್ಕೆ ವೇಗ ನೀಡಲಾಗಿದ್ದು, 7 ತಿಂಗಳಲ್ಲಿ 1.04 ಲಕ್ಷ ಭೂಮಿಗೆ ಪೋಡಿ ಮಾಡಿಕೊಡಲು, ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಹಿಂದಿನ ಸರ್ಕಾರದಅವಧಿಯಲ್ಲಿ,801 ಪ್ರಕರಣಗಳಲ್ಲಿ ಮಾತ್ರ ರೈತರಿಗೆ ಪೋಡಿ ದುರಸ್ತಿ ಮಾಡಿಕೊಡಲಾಗಿತ್ತು.
ನಮ್ಮ ಸರ್ಕಾರ ಬಂದ ನಂತರ ಭೂ ಗ್ಯಾರಂಟಿ ಅಭಿಯಾನದ ಅಡಿ ಕಳೆದ ಡಿಸೆಂಬರ್ ನಿಂದ ನನ್ನ ಭೂಮಿ ಹೆಸರಿನಲ್ಲಿ ಪೋಡಿ ಅಭಿಯಾನ ಕೈಗೊಳ್ಳಲಾಗಿದೆ. ಅದರಲ್ಲಿ 1.04 ಲಕ್ಷ ಜಮೀನುಗಳನ್ನು ಅಳತೆಗೆ ತೆಗೆದುಕೊಂಡಿದ್ದು, ಆ ಪೈಕಿ ಶೇ.20ರಷ್ಟು ಭೂಮಿ ಅಳತೆ ಪೂರ್ಣಗೊಂಡಿದೆ. ಉಳಿದ ಭೂಮಿಗಳಿಗೆ 6 ತಿಂಗಳಲ್ಲಿ ಸರ್ವೇ ಪೂರ್ಣಗೊಳಿಸಿ, ಪೋಡಿ ಮಾಡಿಕೊಡಲಾಗುವುದು. ಉಳಿದಂತೆ 50ರಿಂದ 70 ಸಾವಿರ ಪೋಡಿ ಪ್ರಕರಣಗಳು ಬಾಕಿ ಉಳಿಯುವ ನಿರೀಕ್ಷೆಯಿದೆ ಎಂದು ಹೇಳಿದರು.
ಪೇಪರ್‌ಸ್ ಆಡಳಿತ ಗ್ರಾಮೀಣ ಭಾಗದಲ್ಲಿ ಆಡಳಿತ ಸುಗಮವಾಗಿ ನಡೆಯುವ ಸಂಬಂಧ ಈಗಾಗಲೇ 4 ಸಾವಿರ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ನೀಡಲಾಗಿದೆ. ಆ ಲ್ಯಾಪ್‌ಟಾಪ್‌ಗಳಲ್ಲಿ ಕಂದಾಯ ಇಲಾಖೆಗೆ ಸೇರಿದ ಅಗತ್ಯ ಆನ್‌ಲೈನ್ ಅಪ್ಲಿಕೇಷನ್‌ಗಳನ್ನು ಅಳವಡಿಸಿ, ಆನ್‌ಲೈನ್ ಮೂಲಕವೇ ಕಡತಗಳನ್ನು ಇ-ಆಫೀಸ್ ಮೂಲಕ ವಿಲೇವಾರಿ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಅದಕ್ಕೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
Advertisement