ಪ್ರವಾಹ ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

ಶಿಥಿಲಗೊಂಡ ಶಾಲೆ ಮತ್ತು ಅಂಗನವಾಡಿ ಕಟ್ಟಡಗಳಲ್ಲಿ ತರಗತಿಗಳು ನಡೆಯದಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಬೇಕು. ಅಸುರಕ್ಷಿತ ಮನೆಗಳ ನಿವಾಸಿಗಳನ್ನು ಸ್ಥಳಾಂತರಗೊಳ್ಳುವಂತೆ ಮನವೊಲಿಸಬೇಕು.
Krishna Byregowda
ಸಚಿವ ಕೃಷ್ಣ ಬೈರೇಗೌಡ
Updated on

ಬೆಳಗಾವಿ: ಮಳೆಗಾಲದಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಾಪಿಸಲಾದ ಕಾರ್ಯಪಡೆಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಪ್ರಸಕ್ತ ಸಾಲಿನಲ್ಲಿ ಮುಂಗಾರು ಪ್ರಾರಂಭವಾಗಿದ್ದು ವಾಡಿಕೆಗಿಂತ ಹೆಚ್ಚಿನ ಮಳೆ ಆಗುತ್ತಿದೆ. ನದಿಗಳು ಹೆಚ್ಚಿನ ಒಳಹರಿವು ಕಾಣುತ್ತಿರುವುದರಿಂದ, ಪ್ರವಾಹ ಪೀಡಿತ ಪ್ರದೇಶಗಳಿಂದ ನಿವಾಸಿಗಳು ಮತ್ತು ಜಾನುವಾರುಗಳನ್ನು ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸುವ ಮೂಲಕ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಗತ್ಯವಿದ್ದರೆ, ಪೊಲೀಸ್ ಸಿಬ್ಬಂದಿಯ ಸಹಾಯವನ್ನು ಪಡೆಯಬೇಕು. ವಿಪತ್ತು ನಿರ್ವಹಣೆಯು ಪ್ರತಿಕ್ರಿಯಾತ್ಮಕವಾಗಿರುವುದಕ್ಕಿಂತ ಪೂರ್ವಭಾವಿಯಾಗಿರಬೇಕು. ಸಾರ್ವಜನಿಕೆಗೆ ತೊಂದರೆಯಾದರೆ ಪರಿಹಾರ ವಿತರಿಸಿ, ಬರುವುದು ಅಧಿಕಾರಿಗಳ ಕೆಲಸವಲ್ಲ. ತೊಂದರೆಯಾಗುವ ಮುಂಚೆಯೇ ಸಾರ್ವಜನಿಕರಿಗೆ ತಿಳಿಹೇಳಿ ಅನಾಹುತಗಳನ್ನು ತಪ್ಪಿಸಬೇಕು. ಹಾನಿಗಳನ್ನು ತಡೆಗಟ್ಟಲು ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲಾ ಪಿಡಿಒಗಳು ಮತ್ತು ಸ್ಥಳೀಯ ಸಿಬ್ಬಂದಿ ಈ ಪ್ರಯತ್ನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಅವರು ಹೇಳಿದರು.

ಶಿಥಿಲಗೊಂಡ ಶಾಲೆ ಮತ್ತು ಅಂಗನವಾಡಿ ಕಟ್ಟಡಗಳಲ್ಲಿ ತರಗತಿಗಳು ನಡೆಯದಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಬೇಕು. ಅಸುರಕ್ಷಿತ ಮನೆಗಳ ನಿವಾಸಿಗಳನ್ನು ಸ್ಥಳಾಂತರಗೊಳ್ಳುವಂತೆ ಮನವೊಲಿಸಬೇಕು.

ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ಅಂತಹ ಕಟ್ಟಡಗಳನ್ನು ಗುರುತಿಸಿ ಅವುಗಳ ಬಳಕೆಯನ್ನು ನಿರ್ಬಂಧಿಸಬೇಕು, ನದಿಗಳು ಮತ್ತು ಹೊಳೆಗಳ ಬಳಿ ಸಾರ್ವಜನಿಕರ ಸಂಚಾರವನ್ನು ನಿಯಂತ್ರಿಸಬೇಕು. ತುರ್ತು ಸ್ಥಳಾಂತರಿಸುವಿಕೆಗಾಗಿ ದೋಣಿಗಳ ಸರಿಯಾದ ನಿರ್ವಹಣೆ ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

Krishna Byregowda
ಹಳ್ಳಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ನಿರ್ಧಾರ; 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ- ಕೃಷ್ಣ ಬೈರೇಗೌಡ

ಜಿಲ್ಲೆಯಲ್ಲಿ ಪೋಡಿಮುಕ್ತ ಗ್ರಾಮ ಅಭಿಯಾನವನ್ನು ಹಮ್ಮಿಕೊಳ್ಳಬೇಕು. ತಹಶೀಲ್ದಾರ, ಉಪವಿಭಾಗಾಧಿಕಾರಿಗಳ ಹಂತದಲ್ಲಿ‌ನ ಕೋರ್ಟ್‌ ಕೇಸುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಗ್ರಾಮ ಲೆಕ್ಕಾಧಿಕಾರಿಗಳಿಗೆ ಸ್ಥಳೀಯವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಲು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಲು ಸ್ಥಳಾವಕಾಶ ಒದಗಿಸಲಾಗಿದೆ’ ಎಂದರು.

ಕಂದಾಯ ಗ್ರಾಮದಡಿ ಹಕ್ಕುಪತ್ರ ವಿತರಣೆಗೆ ಕ್ರಮ‌ ವಹಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ವಯ ಅರ್ಹ ಫಲಾನುಭವಿಗಳನ್ನು ಗುರುತಿಸಿ ಹಕ್ಕುಪತ್ರ ವಿತರಣೆಗೆ ತ್ವರಿತ ಕ್ರಮ‌ ಜರುಗಿಸಬೇಕು. ಈ ಕುರಿತು ತಹಶೀಲ್ದಾರರು ಕ್ಷೇತ್ರ ಭೇಟಿ ಮಾಡಿ ಬಿಟ್ಟು ಹೋದಂತಹ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು‌ ಕ್ರಮ‌ ವಹಿಸಬೇಕು ಎಂದೂ ತಿಳಿಸಿದರು.

‘ಆಸ್ತಿಗಳ‌ ಭದ್ರತೆಗೆ ಆಧಾರ ಸಂಖ್ಯೆ ಜೊಡಣೆಯಾಗಿದ್ದು, ಇದನ್ನು ಇನ್ನೂ‌ ಭದ್ರಪಡಿಸಲು ಇ–ಕೆವೈಸಿ ಮಾಡಲಾಗುತ್ತಿದೆ. ಇದರಿಂದಾಗಿ ಒಬ್ಬರ ಆಸ್ತಿ‌ ಇನ್ನೊಬ್ಬರ ಪಾಲಾಗದಂತೆ ಮಾಡಬಹುದು’ ಎಂದೂ ಸಚಿವರು ತಿಳಿಸಿದರು.

‘ಅನುಮತಿ ಇಲ್ಲದೇ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿದ್ದು, ಈ ಕುರಿತು ಪರಿಶೀಲಿಸಬೇಕು. ಕೃಷಿಯೇತರ ಚಟುವಟಿಕೆಗಳಿಗಾಗಿ ಬಳಸಲಾಗುವ ಭೂಮಿಯನ್ನು ಪಹಣಿಯಲ್ಲಿ ದಾಖಲಿಸುವುದರಿಂದ ಭೂಮಿ ಮಾರಾಟದಲ್ಲಿ ಆಗುವಂತಹ‌ ಮೋಸವನ್ನು ತಡೆಯಬಹುದು’ ಎಂದರು.

ಇದೇ ವೇಳೆ ‘ಭೂ ಸುರಕ್ಷಾ ಯೋಜನೆಯಡಿ ಕಂದಾಯ ಇಲಾಖೆಯ ದಾಖಲೆಗಳನ್ನು ಡಿಜಿಟಲೀಕರಣ ಕಾರ್ಯವನ್ನು ಇನ್ನಷ್ಟು ತ್ವರಿತವಾಗಿ ಪೂರ್ಣಗೊಳಿಸಬೇಕು. ಈ ಕಾರ್ಯದಲ್ಲಿ ಉದಾಸಿನ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದ ಕೃಷ್ಣ ಬೈರೇಗೌಡ ಅವರು, ಭೂ ಸುರಕ್ಷ ಯೋಜನೆಯಡಿ ಪ್ರಗತಿ ಸಾಧಿಸದೆ ಇರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಕಂದಾಯ ಇಲಾಖೆಯ‌ ಎಲ್ಲ ಕಚೇರಿಗಳು ಇ–ಆಫೀಸನಡಿ ಕಾರ್ಯ ನಿರ್ವಹಿಸಬೇಕು. ಅದೇ ರೀತಿ ನಾಡ ಕಚೇರಿಗಳೂ ಇ– ಆಫೀಸನಲ್ಲಿಯೇ ಕಡತಗಳನ್ನು‌ ಮಂಡಿಸಬೇಕು.‌ ಈ ಕುರಿತು ಸಿಬ್ಬಂದಿಗೆ ಇ–ಆಫೀಸ್ ಬಳಕೆ ಕುರಿತು ತರಬೇತಿ ನೀಡಿ’ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com