
ಮೈಸೂರು: ‘ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ ಎಂದು ಮಹಾತ್ಮ ಗಾಂಧಿ ಮತ್ತು ಸಿ ರಾಜಗೋಪಾಲಾಚಾರಿ (ರಾಜಾಜಿ) ಅವರ ಮೊಮ್ಮಗ, ಮಾಜಿ ರಾಜ್ಯಪಾಲ, ಲೇಖಕ ಗೋಪಾಲಕೃಷ್ಣ ಗಾಂಧಿ ಅವರು ಹೇಳಿದ್ದಾರೆ.
ಇಲ್ಲಿ ಶನಿವಾರ ನಡೆದ ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ‘ಎ ನೇಮ್ ಇನ್‌ಹೆರಿಟೆಡ್, ಎ ವಾಯ್ಸ್ ಅರ್ನಡ್’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಕುರಿತ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
‘ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ರಾಜೀವ್ ಗಾಂಧಿ ಕೂಡ ತುರ್ತುಪರಿಸ್ಥಿತಿಯನ್ನು ಬಹಿರಂಗವಾಗಿ ವಿರೋಧಿಸಿದ್ದರು. ಸಂಸತ್‌ನಲ್ಲೂ ತುರ್ತು ಪರಿಸ್ಥಿತಿ ಘಟಿಸಬಾರದಿತ್ತು ಎಂದಿದ್ದರು. ಕೆಲವರಿಗೆ ಮಾತ್ರ ಇಂಥ ಧೈರ್ಯವಿರುತ್ತದೆ. ಜನರು ಮೌನವಾಗಿಯೇ ಚುನಾವಣೆ ಮೂಲಕ ಉತ್ತರ ಕೊಟ್ಟಿದ್ದರು ಎಂದು ಸ್ಮರಿಸಿದರು.
ಇಂದಿರಾ ಗಾಂಧಿ ಮಾಡಿದ ಎಲ್ಲವನ್ನೂ ಖಂಡಿಸುವ ಅಗತ್ಯ ನನಗೆ ಕಾಣುತ್ತಿಲ್ಲ. ನನ್ನ ಸಹೋದರರಾದ ರಾಜ್‌ಮೋಹನ್ ಮತ್ತು ರಾಮಸ್ವಾಮಿ ವಿಶೇಷ ಅನುಮತಿಯೊಂದಿಗೆ ರಾಜ್ ಘಾಟ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಕೃಪ್ಲಾನಿ ಸಭೆಯನ್ನುದ್ದೇಶಿಸಿ ಮಾತನಾಡಲು ಎದ್ದಾಗ, ಪೊಲೀಸರು ಅದರ ಮೇಲೆ ದಾಳಿ ಮಾಡಿ, ಸಭೆಗೆ ಯಾವುದೇ ಸಂಬಂಧವಿಲ್ಲದವರನ್ನು ಸಹ ಬಂಧಿಸಿ ಜೈಲಿಗೆ ಹಾಕಿದರು. ಬಂಧಿಸಲ್ಪಟ್ಟವರಲ್ಲಿ ನನ್ನ ಸಹೋದರರೂ ಇದ್ದರು. ಆದರೆ, ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಬೀರುತ್ತದೆ ಎಂದು ಅರಿತ ಇಂದಿರಾ ಗಾಂಧಿಯವರು, ಆದೇಶ ನೀಡಿ ಸಂಜೆಯ ವೇಳೆಗೆ ಬಿಡುಗಡೆ ಮಾಡಿಸಿದರು ಎಂದು ತಿಳಿಸಿದರು.
ಇದೇ ವೇಳೆ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದವರ ಅಸಾಧಾರಣ ಧೈರ್ಯವನ್ನು ಗೋಪಾಲಕೃಷ್ಣ ಗಾಂಧಿ ಅವರು ಶ್ಲಾಘಿಸಿದರು.
ತುರ್ತು ಪರಿಸ್ಥಿತಿ ಮತ್ತೆ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಮರುಕಳಿಸಬಹುದು. ಅಧಿಕಾರಶಾಹಿ ಹಾಗೂ ಸರ್ವಾಧಿಕಾರ ಶಕ್ತಿಯ ವಿರುದ್ಧ ಗಟ್ಟಿಯಾಗಿ ಮಾತಾಡುವ ಧೈರ್ಯ ಎಲ್ಲರಿಗೂ ಬೇಕಾಗುತ್ತದೆ. ರವೀಂದ್ರನಾಥ ಟ್ಯಾಗೋರ್ ಅವರ ‘ಭಯವಿಲ್ಲದ ಮನಸ್ಸು ಮಾತ್ರವೇ ತಲೆಯೆತ್ತಿ ನಡೆಯುತ್ತದೆ’ ಎಂಬ ಮಾತನ್ನು ನಾವು ಸ್ಮರಿಸಬೇಕು ಎಂದು ಹೇಳಿದರು.
Advertisement