
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮೂವರು ನೈಜೀರಿಯನ್ನರನ್ನು ಬಂಧಿಸಲಾಗಿದ್ದು, ಅವರಿಂದ 2.8 ಕೆಜಿ ಸಿಂಥೆಟಿಕ್ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಬಂಧಿತರಿಂದ ಸುಮಾರು 400 ಕೆಜಿ ಹೈಡ್ರೋ ಗಾಂಜಾವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಮತ್ತು ಈ ಡ್ರಗ್ಸ್ ಮೌಲ್ಯ 4 ಕೋಟಿ ರೂ.ಗೂ ಹೆಚ್ಚು ಎಂದು ಪೊಲೀಸರು ಹೇಳಿದ್ದಾರೆ
ಬಂಧಿತ ವಿದೇಶಿ ಪ್ರಜೆಗಳು ವೈದ್ಯಕೀಯ ವೀಸಾದಲ್ಲಿ ಭಾರತಕ್ಕೆ ಆಗಮಿಸಿದ್ದರು ಮತ್ತು ಅವರು ವೀಸಾ ಅವಧಿ ಮೀರಿ ನೆಲೆಸಿರುವುದು ಕಂಡುಬಂದಿದೆ ಎಂದು ಬೆಂಗಳೂರು ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸಿ ಕೆ ಬಾಬಾ ಅವರು ತಿಳಿಸಿದ್ದಾರೆ.
"ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಮತ್ತು ಶಂಕಿತ ಚಲನವಲನಗಳ ಕಣ್ಗಾವಲಿನ ಆಧಾರದ ಮೇಲೆ, ನಮ್ಮ ತಂಡ ವಿದೇಶಿ ಪ್ರಜೆಗಳನ್ನು ಒಳಗೊಂಡ ಅನುಮಾನಾಸ್ಪದ ಚಟುವಟಿಕೆಯನ್ನು ಗುರುತಿಸಿದೆ" ಎಂದು ಬಾಬಾ ವರದಿಗಾರರಿಗೆ ಹೇಳಿದ್ದಾರೆ.
ರಾಜನುಕುಂಟೆಯಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿ, 2.8 ಕೆಜಿ ಎಂಡಿಎಂಎ, ಸುಮಾರು 400 ಕೆಜಿ ಹೈಡ್ರೋ ಗಾಂಜಾ, 2 ಲಕ್ಷ ರೂ.ಗೂ ಹೆಚ್ಚು ನಗದು, ಏಳು ಮೊಬೈಲ್ ಫೋನ್‌ಗಳು, ಪ್ಯಾಕೇಜಿಂಗ್ ಸಾಮಗ್ರಿಗಳು ಮತ್ತು ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು "ವೈದ್ಯಕೀಯ ಕಾರಣಗಳನ್ನು" ಉಲ್ಲೇಖಿಸಿ ಡಿಸೆಂಬರ್ 2024 ರಲ್ಲಿ ದೆಹಲಿ ಮೂಲಕ ಭಾರತ ಪ್ರವೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಮೂವರ ವಿರುದ್ಧವೂ NDPS ಕಾಯ್ದೆಯ ಸಂಬಂಧಿತ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬಾಬಾ ಹೇಳಿದ್ದಾರೆ.
"ಈ ಕಾರ್ಯಾಚರಣೆಯ ಹಿಂದೆ ದೊಡ್ಡ ಜಾಲವಿರುವುದು ಕಂಡುಬರುತ್ತಿದೆ. ಮಾದಕ ದ್ರವ್ಯಗಳ ಮೂಲ, ಕಾರ್ಯ ವಿಧಾನ ಮತ್ತು ಉದ್ದೇಶಿತ ಪೂರೈಕೆ ತಾಣಗಳನ್ನು ಪತ್ತೆಹಚ್ಚಲು ನಮ್ಮ ತಂಡ ಮತ್ತಷ್ಟು ತನಿಖೆ ನಡೆಸುತ್ತದೆ" ಎಂದು ಅವರು ತಿಳಿಸಿದ್ದಾರೆ.
Advertisement