
ಬೆಂಗಳೂರು: ರಾಜ್ಯದ ಎಲ್ಲಾ ಜಲಪಾತಗಳು, ಧಾರ್ಮಿಕ ಕ್ಷೇತ್ರ ಹಾಗೂ ವನ್ಯಜೀವಿ ತಾಣಗಳತ್ತ ಪ್ರವಾಸಿಗರ ಸೆಳೆಯಲು ಮುಂದಾಗಿರುವ ರಾಜ್ಯ ಸರ್ಕಾರ ಸಂಯೋಜಿತ ಪ್ರವಾಸ ಪ್ಯಾಕೇಜ್ ಆರಂಭಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಪ್ರವಾಸೋದ್ಯಮ ಇಲಾಖೆಯು ಸರ್ಕಾರಿ ಮತ್ತು ಖಾಸಗಿ ಪಾಲುದಾರರನ್ನು ಒಳಗೊಂಡಂತೆ ಕ್ಯುರೇಟೆಡ್ ಪ್ರವಾಸ (ಸಂಯೋಜಿತ ಪ್ರವಾಸ) ಪ್ಯಾಕೇಜ್ ಆರಂಭಿಸಲು ಚಿಂತನೆ ನಡೆಸಿದೆ.
ದತ್ತಿ, ನೀರಾವರಿ, ಕಂದಾಯ ಮತ್ತು ಅರಣ್ಯ ಇಲಾಖೆಗಳನ್ನು ಒಳಗೊಂಡಂತೆ ಜಲಪಾತ, ಧಾರ್ಮಿಕ ಹಾಗೂ ವನ್ಯಜೀವಿ ಪ್ರವಾಸಗಳನ್ನು ಪ್ರಾರಂಭಿಸಲು ಮುಂದಾಗಿದೆ. ತನ್ನ ಈ ಚಿಂತನೆಯಲ್ಲಿ ಆತಿಥ್ಯ ವಲಯದ ಖಾಸಗಿ ಸಂಸ್ಥೆಗಳು ಮತ್ತು ಸಾಹಸ ಗುಂಪುಗಳನ್ನೂ ಸೇರ್ಪಡೆಗೊಳಿಸಲು ಮುಂದಾಗಿದೆ.
ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಗೋಕಾಕ್, ಬೆಳಗಾವಿ, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಪಶ್ಚಿಮ ಘಟ್ಟಗಳ ಭಾಗಗಳಲ್ಲಿ ಸ್ಥಳ ಗುರ್ತಿಸಲಾಗುತ್ತಿದ್ದು, ಇಲಾಖೆಯು ಈಗಾಗಲೇ ಪಾಲುದಾರರನ್ನು ಶಾರ್ಟ್ ಲಿಟ್ ಮಾಡಿದೆ ಎಂದು ತಿಳಿದುಬಂದಿದೆ.
ಈ ಪ್ಯಾಕೇಜ್ ನಲ್ಲಿ ಪ್ರವಾಸಿಗರು ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಕನಿಷ್ಠ 2-3 ಸ್ಥಳಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಕಾರ್ಪೊರೇಟ್ ವಲಯದಲ್ಲಿರುವವ ಮಹಿಳೆಯರು ಹೆಚ್ಚಾಗಿ ಪ್ರವಾಸಗಳಿಗೆ ತೆರಳುತ್ತಿದ್ದು, ಪ್ಯಾಕೇಜ್ ಗಳನ್ನು ರೂಪಿಸುವ ಕೆಲಸ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ,
ಇಲ್ಲಿಯವರೆಗೆ ಗಗನಚುಕ್ಕಿ-ಬರಾಚುಕ್ಕಿ, ಜೋಗ್ ಜಲಪಾತ ಅಥವಾ ಇತರ ಸ್ಥಳಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಳಸಿಕೊಂಡು ಒಂದು ಅಥವಾ ಎರಡು ದಿನಗಳ ಪ್ರವಾಸವನ್ನು ನಡೆಸಲಾಗುತ್ತಿತ್ತು. ಇವುಗಳನ್ನು ಒಂದು ವಾರ ಅಥವಾ ವಾರಾಂತ್ಯದ ಸಂಯೋಜಿತ ಪ್ರವಾಸಗಳಾಗಿ ವಿಸ್ತರಿಸಲು ಚಿಂತನೆ ನಡೆಸಲಾಗಿದೆ.
ಸಾಹಸ ಪ್ರವಾಸೋದ್ಯಮ ಪ್ಯಾಕೇಜ್‌ಗಳನ್ನು ನಡೆಸುವ ಅನೇಕ ಖಾಸಗಿ ಗುಂಪುಗಳು ಮತ್ತು ವ್ಯಕ್ತಿಗಳು ಇದ್ದು, ಇಂತಹವರು ಪ್ರವಾಸಿಗರನ್ನು ಆಹ್ವಾನಿಸಲು ಸಾಮಾಜಿಕ ಜಾಲತಾಣ ವೇದಿಕೆಗಳನ್ನು ಬಳಸುತ್ತಿರುವುದು ನಿಜ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳನ್ನು ಒಳಗೊಂಡ ಪ್ರಯಾಣ ಮತ್ತು ವಸತಿ ವ್ಯವಸ್ಥೆಗಳನ್ನು ವಿಂಗಡಿಸಲಾಗುತ್ತಿದ್ದು, ಜುಲೈ ತಿಂಗಳಿನಲ್ಲಿ ನಮ್ಮ ಹೊಸ ಯೋಜನೆಯನ್ನು ಪ್ರಾರಂಭಿಸುವ ನಿರೀಕ್ಷೆಗಳಿವೆ. ಯೋಜನೆ ಆರಂಭಿಸಲು ಮಳೆಗಾಲ ಉತ್ತಮ ಸಮಯವಾಗಿದೆ. ಭೂಕುಸಿತಗಳು ಸಮಸ್ಯೆಗಳು ಎದುರಾಗಿಲ್ಲ. ಜಪಲಾತಗಳ ನೋಟ ರಮಣೀಯವಾಗಿವೆ ಎಂದು ತಿಳಿಸಿದ್ದಾರೆ.
Advertisement